Baidhashree

ಸಂಸ್ಥೆಯ ಬಗ್ಗೆ

ಸಂಸ್ಥೆಯ ಬಗ್ಗೆ

ಅನ್ಯಾಯ ಅಧರ್ಮಗಳ ಮೆಟ್ಟಿ ನಿಂತು, ಸದಾ ಸತ್ಯ, ಧರ್ಮ, ನ್ಯಾಯದ ರಕ್ಷಣೆಗಾಗಿ ಹೋರಾಡಿದ ತುಳುನಾಡ ಅವಳಿ ವೀರರಾದ ಕೋಟಿ – ಚೆನ್ನಯರ ವೀರಗಾಥೆ, ಪಾಡ್ದನದಲ್ಲಿ ಉಲ್ಲೇಖವಿರುವಂತೆ “ಏಳ್ ಇರ್ಲು ಎಡ್ಮ ಪಗೆಲ್ ಪನ್ಪಿನಾತುಂಡು”. ಅಂದರೆ ಹೇಳಹೊರಟರೆ ಏಳು ರಾತ್ರಿ ಎಂಟು ಹಗಲು ಸಾಲದು. ಅಂತಹ ಕೋಟಿ-ಚೆನ್ನಯರ ಕಾಲದಲ್ಲಿ ಅಂಗ ಸಾಧನೆ, ಮಲ್ಲ ಸಾಧನೆಗಳ ಕೇಂದ್ರವಾಗಿದ್ದ, ಇಂದು ಕೋಟಿ -ಚೆನ್ನಯರನ್ನು ಆರಾಧಿಸುತ್ತಿರುವ ಗರೋಡಿಗಳು 250 ಕ್ಕೂ ಹೆಚ್ಚಿವೆ. ಕೋಟಿ – ಚೆನ್ನಯರು ತಮ್ಮ ಜೀವಿತ ಕಾಲದಲ್ಲಿಯೇ 66 ಗರೋಡಿ 33 ತಾವುಗಳನ್ನು ಕಟ್ಟಿಸಿಕೊಂಡಿದ್ದರು ಎಂಬುದು ಇಂದಿಗೂ ಬೈದರ ದರ್ಶನದ ನುಡುಕಟ್ಟಿನಲ್ಲಿದೆ. ಇಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಐನೂರರಿಂದ ಸಾವಿರ ಮನೆಗಳಿಗೊಂದು ಗರೋಡಿಯಿದ್ದು ಕೂಡುಕಟ್ಟಿನ ವ್ಯವಸ್ಥೆಯಿದೆ. ನಂಬುವ ಲಕ್ಷೋಪಲಕ್ಷ ಭಕ್ತರಿದ್ದಾರೆ. ಸುಮಾರು ಐನೂರು ವರ್ಷಗಳ ಹಿಂದೆ ಕೋಟಿ-ಚೆನ್ನಯರು ಹುಟ್ಟಿ ಬೆಳೆದು ಬಾಳಿದ ಪಡುಮಲೆ, ಪಂಜ, ಎನ್ಮೂರುಗಳಲ್ಲಿ ಅವರ ಆಡಂಬೋಲದ ಜೀವಂತ ಕುರುಹುಗಳಿವೆ. ಇವುಗಳೆಲ್ಲವೂ ಅಧ್ಯಯನಯೋಗ್ಯ ವಿಷಯಗಳು. ಇವುಗಳ ಕ್ರಮಬದ್ಧ ಸಂಶೋಧನೆ, ಅಧ್ಯಯನ ನಡೆಸಿ ನಮ್ಮ ಹಿರಿಯರ ಚರಿತ್ರೆ, ನಂಬಿಕೆ, ಆಚರಣೆಗಳ ಮಾಹಿತಿಗಳನ್ನು ಮುಂದಿನ ಪೀಳಿಗೆಗೆ ಕಾಪಿಡಬೇಕೆಂಬ ಸದುದ್ದೇಶದಿಂದ 1984-85 ರಲ್ಲಿ 15 ಮಂದಿ ಸಮಾನ ಮನಸ್ಕರು ಸೇರಿ ಉಡುಪಿಯ ಆದಿವುಡುಪಿಯಲ್ಲಿ ಆರಂಭಿಸಿದ ಸಂಸ್ಥೆಯೇ “ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ.), ಆದಿವುಡುಪಿ” ತಾ. 11.12.1988 ರಂದು ಗೋವಿಂದ ಪೈ ಸಂಶೋಧನಾ ಕೇಂದ್ರ, ಎಮ್. ಜಿ. ಎಮ್. ಕಾಲೇಜ್, ಉಡುಪಿ ಇಲ್ಲಿ ವಿದ್ವಜ್ಜನರ ಸಮ್ಮುಖದಲ್ಲಿ ಉದ್ಘಾಟನೆ ಮಾಡುವ ಮುಖಾಂತರ ಸಂಸ್ಥೆಯನ್ನು ಸಮಾಜಕ್ಕೆ ಪರಿಚಯ ಮಾಡಲಾಯಿತು. 14.09.1988 ರಲ್ಲಿ ಸಂಸ್ಥೆಯನ್ನು ನೋಂದಾಯಿಸಲಾಯಿತು. ನೋಂದಾವಣಿ ಸಂಖ್ಯೆ 28 / 88-89.

ಸಂಸ್ಥೆಯು 1995 ರಲ್ಲಿ ಸ್ವಂತ ಕಟ್ಟಡ ಹೊಂದುವವರೆಗೆ ಹತ್ತು ವರ್ಷಗಳ ಕಾಲ ಆದಿವುಡುಪಿಯ “ಶ್ರೀ ಅಂಬಾ ನಿಲಯ” ದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ವಿಶ್ವಸ್ತರ ಸತತ 6 ವರ್ಷಗಳ ಕ್ಷೇತ್ರಾಧ್ಯಯನದ ಪ್ರತಿಫಲವಾಗಿ “ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ”ವು ತಾ. 03.06.1990 ರಂದು ಬಿಡುಗಡೆಗೊಂಡಿತು. ಮುಂದೆ ಈ ಗ್ರಂಥವು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪುರಸ್ಕೃತವೂ ಆಯಿತು.

ಮುಂದುವರಿದು, 1992 ರಲ್ಲಿ ಶ್ರೀ ಬೈದರ ಕೃಪೆಯಿಂದ ಆದಿವುಡುಪಿಯ ಹೃದಯಭಾಗದಲ್ಲಿ 5 ಸೆಂಟ್ಸ್ ಸರಕಾರೀ ಭೂಮಿಯನ್ನು ಖರೀದಿಸಿ ಅದರಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ತಾ. 25.11.1993 ರ ಉತ್ಥಾನ ದ್ವಾದಶಿಯಂದು ಕಲ್ಮಾಡಿ ಗರೋಡಿಯ ಅಂದಿನ ಬೈದರ ದರ್ಶನ ಪೂಜಾರಿಯವರಾದ ಮೆನ್ಪ ಪೂಜಾರಿಯವರ ಮುಖಾಂತರ ಜೋಡು ತೆಂಗಿನಕಾಯಿಯಿಟ್ಟು ಪ್ರಾರ್ಥನೆ ಮುಹೂರ್ತ ಮಾಡಲಾಯಿತು.

ಮುಂದೆ ಶ್ರೀ. ಜಯ ಟಿ. ಪೂಜಾರಿ ಮತ್ತು ಶ್ರೀ. ತೋಮರ ಪೂಜಾರಿ ಹಾಗು ಹಲವು ದಾನಿಗಳ ನೆರವಿನಿಂದ ನೆಲ ಅಂತಸ್ತನ್ನು ಪೂರ್ಣಗೊಳಿಸಿ ತಾ. 02.05.1995 ರಂದು ” ಬೈದಶ್ರೀ” ಎಂದು ಕಟ್ಟಡಕ್ಕೆ ನಾಮಕರಣ ಮಾಡಿ ಉದ್ಘಾಟಿಸಲಾಯಿತು.

ಕೋಟಿ-ಚೆನ್ನಯರ ಪಾರ್ದನದಲ್ಲಿ ವರ್ಣಿಸಿರುವ ಅವರ ದೈಹಿಕ ದೃಶ್ಯ ಸೌಂದರ್ಯವನ್ನು ತೈಲ ಚಿತ್ರದಲ್ಲಿ ಸಂಸ್ಥೆಯು ರೂಪಿಸಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಇಂದು ಸಾರ್ವತ್ರಿಕವಾಗಿ ಸ್ವೀಕಾರಗೊಂಡು ಕೋಟಿ-ಚೆನ್ನಯರ ಈ ಭಾವಚಿತ್ರವು ಮನೆ-ಮನಗಳಲ್ಲಿ ಆರಾಧಿಸಲ್ಪಡುತ್ತಿರುವುದು ಸಂಸ್ಥೆಯ ಮೇರು ಸಾಧನೆಗಳಲ್ಲೊಂದಾಗಿದೆ. ನಂತರದ ವರ್ಷಗಳಲ್ಲಿ ದಾನಿಗಳ, ಸರಕಾರದ ಅನುದಾನದ ಮೂಲಕ ಕಟ್ಟಿಸಿಕೊಂಡ ನೆಲಮಹಡಿ ಸಮೇತ ನಾಲ್ಕು ಮಹಡಿಗಳ ಸುಸಜ್ಜಿತ ಕಟ್ಟಡದಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

ಸಂಸ್ಥೆಯು “ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ”, 2002ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ನೆರವಿನಿಂದ ಪ್ರಕಟಗೊಂಡ “ಕೋಟಿ-ಚೆನ್ನಯ ಪಾರ್ದನ ಸಂಪುಟ” ಹಾಗು 2004 ರಲ್ಲಿ ಪ್ರಕಟಗೊಂಡ “ಬೈದ ದರ್ಶನ ಸಚಿತ್ರ ಕಥಾಕೋಶ” ಗಳಂತಹ ಕೋಟಿ-ಚೆನ್ನಯರ ಜೀವನ ಚರಿತ್ರೆ, ತುಳು ಸಂಸ್ಕೃತಿ, ತುಳು ಜನರ ಬದುಕಿಗೆ ಸಂಬಂಧಪಟ್ಟ ಹಲವು ಪುಸ್ತಕಗಳನ್ನು ಪ್ರಕಾಶಿಸಿರುತ್ತದೆ.

ಯಕ್ಷಗಾನ ತರಬೇತಿ, ತುಳು ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳು, ಪುಸ್ತಕ ಪ್ರಕಾಶನ ಇತ್ಯಾದಿ ಹಲವು ಕಾರ್ಯಕ್ರಮಗಳ ಮೂಲಕ ಕೋಟಿ-ಚೆನ್ನಯರ, ತುಳು ಜನರ ಚರಿತ್ರೆ, ಸಂಸ್ಕೃತಿ, ಆಚರಣೆಗಳ ಅಧ್ಯಯನ ನಡೆಸುತ್ತಿರುವ ನಮ್ಮ ಸಂಸ್ಥೆಯು ಕಾರ್ಕಳದ “ಕೋಟಿ-ಚೆನ್ನಯ ಥೀಮ್ ಪಾರ್ಕ್” ಗೆ 2007-08 ರ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಹಾಗು 100 ಎಕರೆ ಜಮೀನಿನ ಅನುದಾನವನ್ನು ರಾಜ್ಯ ಸರಕಾರದಿಂದ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ.

ಸ್ಥಾಪಕ ವಿಶ್ವಸ್ತ ಮಂಡಳಿ

ಉಪಯುಕ್ತ ಲಿಂಕ್ಸ್

ಸಂಪರ್ಕ ಮಾಹಿತಿ

ಸಾಮಾಜಿಕ ಲಿಂಕ್ಸ್