ಶ್ರೀ ಧರ್ಮರಸು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ, ಬೊಮ್ಮರಬೆಟ್ಟು
ಉಡುಪಿಯಿಂದ ಹಿರಿಯಡಕಕ್ಕೆ ಬಂದು, ಹಿರಿಯಡ್ಕದಿಂದ ಬಸ್ತಿ ಮಾರ್ಗವಾಗಿ ಸುಮಾರು ೪ ಕಿ.ಮೀ. ಮುಂದೆ ಹೋದರೆ ಬೊಮ್ಮರಬೆಟ್ಟು ಗರೋಡಿ ಇದೆ.
ಉಡುಪಿ ಹಿರಿಯಡ್ಕ ಬೊಮ್ಮರಬೆಟ್ಟುವಿನಲ್ಲಿರುವ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು,
ಇದಕ್ಕೆ ಸುಮಾರು ಇನ್ನೂರು ಮೂನ್ನೂರು ವರ್ಷಗಳ ಇತಿಹಾಸವಿದೆಯೆಂದು ಹೇಳಲಾಗುತ್ತದೆ. ಷಡಾಧಾರ ಪ್ರತಿಷ್ಠೆಯಾದ ಬಗ್ಗೆ ಸ್ಪಷ್ಟ
ಮಾಹಿತಿ ಇಲ್ಲ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಜೈನರ ಕಾಲದಲ್ಲಿ ಕೋಟಿಚೆನ್ನಯ್ಯರು ದೊಡ್ಡಕೆರೆ ಬೆಟ್ಟು ಬಿಲ್ಲವ ಯಜಮಾನರ ಬಳಿ ಬಂದು ಬೀಡಿಗೆ ಹೋಗುವ ದಾರಿ ತೋರಿಸಲು ಹೇಳುತ್ತಾರೆ. ತಾನು ಕೈಗೊಂಡ ಕೆಲಸ ಪೂರೈಸುವ ಅವಸರದಲ್ಲಿದ್ದ ಪೂಜಾರಿಯವರು ಬಂದವರಿಗೆ ಕುಳಿತು ಕೊಳ್ಳಲು ಹೇಳುತ್ತಾರೆ. ಕೋಟಿ ಚೆನ್ನಯ್ಯರು ಅದೃಶ್ಯರಾಗುತ್ತಾರೆ. ಹತ್ತಿರದ ಭಟ್ಟರ ಮನೆಗೆ ಹೋದಾಗ ಅಲ್ಲಿಯೂ ಅವರೂ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಮುಂದೆ ಅಂಗಡಿ ಬೆಟ್ಟು ಪೂಜಾರಿ ಯವರ ಮನೆಗೆ ತೆರಳುತ್ತಾರೆ. ತುಳಸಿ ಗಿಡಕ್ಕೆ ನೀರು ಹೊಯ್ಯುತ್ತಿದ್ದ ಪೂಜಾರಿಯವರು ಹೋಗುವ ಎಂದು ಹೇಳಿ ಬೀಡಿಗೆ ಕರೆದುಕೊಂಡು ಹೋಗುವರು. ದೂರದಲ್ಲೇ ಕಾಣುವ ಬೀಡನ್ನು ತೋರಿಸುತ್ತಾರೆ… ಅತ್ತ ಹೆಜ್ಜೆಯಿಟ್ಟ ಕೋಟಿ ಚೆನ್ನಯ್ಯರು ಇವರು ನೋಡುತ್ತಿದ್ದಂತೇ ಅದೃಶ್ಯರಾಗುತ್ತಾರೆ. ವಿಸ್ಮಯ ಗೊಂಡ ಪೂಜಾರಿಯವರು ಈ ವಿಷಯವನ್ನು ಬೀಡಿನ ಯಜಮಾನರಿಗೆ ತಿಳಿಸುತ್ತಾರೆ. ಅದೇ ದಿನ ರಾತ್ರಿ ಬೀಡಿನ ಯಜಮಾನರಿಗೆ ಕೋಟಿ ಚೆನ್ನಯ್ಯರು ಕನಸಿನಲ್ಲಿ ಬಂದು ನಿಶಾನೆಯಾಗಿ ಹತ್ತಿರದ ಪಾದೆಯಲ್ಲಿ ಸುರ್ಯ ಊರಿದ್ದೇವೆ. ಅಲ್ಲಿ ಗರೋಡಿ ಕಟ್ಟಿಸ ಬೇಕೆನ್ನುತ್ತಾರೆ. ಬೀಡಿನ ಯಜಮಾನರ ಆಣತಿಯಂತೆ ಇಲ್ಲಿನ ಐಂದ್ರಾಳ ಪಟ್ಟದ ಮಂದಿ ಮತ್ತು ಊರ ಹತ್ತು ಸಮಸ್ತರು ಸೇರಿ ಗರೋಡಿ ಕಟ್ಟುತ್ತಾರೆ.
ಕೋಟಿ ಚೆನ್ನಯ್ಯರು ಬೀಡಿನ ಯಜಮಾನರಿಗೆ ಕನಸಿನಲ್ಲಿ ಬಂದು ಹೇಳಿದ ಪಣೆ ಊರಿದ ಪಾದೆಯಲ್ಲಿ ಬಹುತೇಕ ವರ್ಷವಿಡೀ ನೀರು ಜಿನುಗುತ್ತದೆ. ಇಲ್ಲಿ ಕೋಟಿ ಚೆನ್ನಯ್ಯರ ಪಾದದ ಗುರುತುಗಳು ಇದೆ. ಗರೊಡಿಯಲ್ಲಿ ಏನೇ ಕೆಲಸ ಕಾರ್ಯಗಳಾಗಲಿ ಮೊದಲು ಈ ಸ್ಥಳದಲ್ಲಿ ದೀಪ ಇಡಲಾಗುವುದು. ಆವೇಶದಲ್ಲಿ ದರುಶನ ಪಾತ್ರಿಗಳು-ನೇಮ ಕಟ್ಟದ ಪರವರು ಇಲ್ಲಿಗೆ ಬಂದು ನೀರು ಜಿನುಗುವ ಸ್ಥಳದಲ್ಲಿ ದೀಪಕ್ಕೆ ಸುತ್ತು ಬಂದು ಹೋಗುವ ಪದ್ಧತಿ ಈಗಲೂ ಇದೆ. ಈ ಗರೋಡಿಗೆ ಅಗೆಲು- ನೇಮೋತ್ಸವದ ಸಂದರ್ಭ ನಿಗದಿತ ದಿನ ಮೂಡುಮಠ ಲಕ್ಷ್ಮೀ ಜನಾರ್ಧನ ದೇವರ ತೀರ್ಥ ಪ್ರಸಾದವನ್ನು ಅಲ್ಲಿನ ಅರ್ಚಕರು ತರುವ ವಾಡಿಕೆ ಈಗಲೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗಬ್ರಹ್ಮರ ಮೂರ್ತಿ, ಮೇಲೆ ಗಾಳಿದೇವರು, ಮಧ್ಯದಲ್ಲಿ ಕೆಳಗಿನ ದೇವರುಗಳಿಗೆ ಪೂಜೆ ಇದೆ
ಬ್ರಹ್ಮಗುಂಡದ ಎಡಕ್ಕೆ ಕೋಟಿಚೆನ್ನಯ್ಯರು ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ.
ಗುಂಡದ ಬಲಕ್ಕೆ ಒಕ್ಕು ಬಳ್ಳಾಲರು, ಕುಜುಂಬ ಕಾಂಜವ ಮತ್ತು ಒಬ್ಬ ಹುಡುಗನ ಮರದ ಪಾಪೆಗಳಿವೆ.
ಬ್ರಹ್ಮಗುಡಿಯ ಹೊರಗೆ ಮಾಯಂದಾಳ್ ಮತ್ತು ಮಗು (ಪಾಪೆಗಳು), ಜುಮಾದಿ-ಬಂಟ, ಜೋಗಿಪುರುಷ-ಪರಿವಾರ ದೈವ, ಹುಲಿಚಾಮುಂಡಿ-ಬಂಟ , ಮರ್ಲ್ ಭೂತ, ಬ್ರಾಂದಿಭೂತ, ಆಚಾರಿ ಮಂಚಗಳಿವೆ.
ಗರೋಡಿಯ ಆವರಣದಲ್ಲಿ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳಗುಡಿ, ಆಯದ ಕಲ್ಲು, ಬೊಬ್ಬರ್ಯ ಮುಂಡಿಗೆ, ಹಲಸಿನ ಮರದ ಕಟ್ಟೆಯಲ್ಲಿ ಮಹಮ್ಮಾಯಿ ಸನ್ನಿಧಿಗಳಿವೆ.
ವಾಸು ಪೂಜಾರಿ
2007 ರಿಂದ ವಾಸು ಪೂಜಾರಿ (ಪ್ರಾಯ- 65), ಗರೋಡಿಮನೆ, ಇವರು ಪೂಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು : ವಿಠಲ ಪೂಜಾರಿ 1973-2007 ( ವಾಸು ಪೂಜಾರಿಯವರ ಮಾವ) ಕೋಟಿ ಪೂಜಾರಿ 1943-1973 (ವಿಠಲ ಪೂಜಾರಿಯವರ ಮಾವ) ಪೂವ ಪೂಜಾರಿ 1943 ರ ಮೊದಲು ( ಕೋಟಿ ಪೂಜಾರಿಯವರ ಮಾವ) ಈ ಸೇವೆ ಮಾಡಿದ್ದರು.
ಭವನ್ ಪೂಜಾರಿ ಮತ್ತು ಸದಾನಂದ ಪೂಜಾರಿಯವರು ಇಲ್ಲಿಯ ಬೈದರ ದರ್ಶನದ ಸ್ಥಳ ಪಾತ್ರಿಗಳು. ಇವರ ಮೊದಲು ಹಿರಿಯರಾದ ಬೊಗ್ಗು ಪೂಜಾರಿ, ಪೂವ ಪೂಜಾರಿ, ವೆಂಕಪ್ಪ ಪೂಜಾರಿ, ತನ್ಯ ಪೂಜಾರಿ, ಬೊಳ್ಳು ಪೂಜಾರಿ, ಅಪ್ಪು ಪೂಜಾರಿ, ರಾಮ ಪೂಜಾರಿ ಇವರುಗಳು ಈ ಸೇವೆ ಮಾಡಿದ್ದರು.
ಬೊಮ್ಮರಬೆಟ್ಟು ಬೀಡು ಮನೆತನದ ಯಜಮಾನರು ಈ ಗರೋಡಿಯ ಮೊಕ್ತೇಸರರು..
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಸೋಣ ಪೂರ್ತಿ
ಒಂದು ತಿಂಗಳು ಹೂವಿನ ಪೂಜೆ, ಕದಿರು ಕಟ್ಟುವುದು, ಹರಕೆ ಗಜ್ಜೆಯಿ ಸೇವೆ ಇದೆ. ಅಗೆಲ್ ಅನ್ನ ನೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ ಮಾಯಿ ಹುಣ್ಣಿಮೆಯಂದು ಜರಗುತ್ತದೆ. ನೇಮೋತ್ಸವದ ಮರುದಿನ ಬೆಳಿಗ್ಗೆ ಮಾಯಂದಾಳ ನೇಮ, ಪರಿವಾರ ದೈವಗಳ ಕೋಲ ಕಟ್ಟು ಕಟ್ಟಳೆಯಾಗಿ ನಡೆಯುತ್ತದೆ. ಗರೋಡಿಯಲ್ಲಿ ಬೀಡು ಕುಟುಂಬದ ವತಿಯಿಂದ ಪ್ರತಿವರ್ಷ ತುಳಸಿ ಪೂಜೆ, ಕಂಬಳ ಹಾಗೂ ಅಗೆಲ್ ಅನ್ನ ನೈವೇದ್ಯ ಸೇವೆ, ಕೊಡಮಣಿತ್ತಾಯ ಕೋಲವಿದೆ, ಎರಡು ವರ್ಷಗಳಿಗೊಮ್ಮೆ ಬೈದರು ನೇಮ ನಡೆಯುತ್ತದೆ. ಹೊಸ ಭತ್ತದ ಅನ್ನ ನೈವೇದ್ಯ ಸೇವೆ ಗರೋಡಿಯಲ್ಲಿ ಜರಗದೆ ಊರಿನಲ್ಲಿ ಬೇರೆ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಗರೋಡಿಯ ಅಂಗಣದಲ್ಲೇ ಮಹಮ್ಮಾಯಿ ಸನ್ನಿಧಾನ ಇರುವುದರಿಂದ ಮಾರಿ ಸೇವೆ ಇದೆ.
ಬೊಮ್ಮರಬೆಟ್ಟು, ಪಂಚನಬೆಟ್ಟು, ಕೈರಾಳಿ ಕೆರೆ, ಕೊಂಡಾಡಿ ಕೆರೆ, ಮಾಣ್ಯಾ ಕೆರೆ, ಮುಂಡುಜೆ ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಬೊಮ್ಮರ ಬೆಟ್ಟು ಕೂಡು ಕಟ್ಟಿನಲ್ಲಿ ಸುಮಾರು 400 ಮನೆಗಳಿವೆ. ಕೂಡುಕಟ್ಟಿನ ಮಂದಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡುಕಾಯಿ ಕಾಣಿಕೆ ತೆಗೆದಿಡುವುದು. ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ, ಕಲಶ ಕಟ್ಟಿ ಶುದ್ಧ ಹೋಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಜಗ್ಗುಪರವ ದೊಂಡೇರಂಗಡಿ ಇವರು ಈ ಗರೋಡಿಯ ನೃತ್ಯ ವಿಷರಾದರು. ಇವರ ಮೊದಲು ಪಿಜಿನ ಪರವ, ಉಗ್ಗಪ್ಪ ಪರವ, ಮೆಣ್ಕ ಪರವ, ಬೂಬ ಪರವ, ಅಮ್ಮು ಪರವ, ಗುಡ್ಡ ಪರವ, ನರಂಗ ಪರವ, ಬಾಬು ಪರವ, ಚಲ್ಲ ಪರವ, ದೇವು ಪರವ ಇವರು ಈ ಸೇವೆ ಮಾಡಿದ್ದರು.
ಗರೋಡಿಯ ಜೀಣೋದ್ಧಾರದ ವಿವರ.
1944- ಜೀಣೋದ್ಧಾರ ಬೈ ಹುಲ್ಲಿನ ಮಾಡು ತೆಗೆದು ಹಂಚಿನ ಹೊದಿಕೆ
1978- ಜೀಣೋದ್ಧಾರ- ಬ್ರಹ್ಮಕಲಶ.
1996- ಸಂಪೂರ್ಣ ಜೀಣೋದ್ಧಾರ – ಬ್ರಹ್ಮಕಲಶ
2008- ಬ್ರಹ್ಮಕಲಶ
ಗರೋಡಿಯ ವಿಳಾಸ :
ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿ ಬೊಮ್ಮರ ಬೆಟ್ಟು,
ಅಂಚೆ ಹಿರಿಯಡ್ಕ,
ಉಡುಪಿ ತಾಲೂಕು & ಜಿಲ್ಲೆ – 576113
ಪೂಪೂಜನೆಯವರ ವಿಳಾಸ:
ವಾಸು ಪೂಜಾರಿ
ಗರೋಡಿಮನೆ, ಅಂಗಡಿಬೆಟ್ಟು,
ಬೊಮ್ಮರಬೆಟ್ಟು, ಹಿರಿಯಡ್ಕ ಅಂಚೆ,
ಉಡುಪಿ-576113
ದೂರವಾಣಿ-9740689657
ಮಾಹಿತಿ ಸಂಗ್ರಹಿಸಿದ ದಿನಾಂಕ:
15-07-2022