Baidhashree

Shree Brahma Baidarkala Garodi, Muggeri

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಮುಗ್ಗೇರಿ

ಉಡುಪಿಯಿಂದ NH 66 ಮೂಲಕ ಕಲ್ಯಾಣಪುರ ಕೆ.ಜಿ.ರೋಡ್ ಮೂಲಕ ಸಾಗಿ ಕೊಳಲಗಿರಿ, ಹಾವಂಜೆಯ ನಂತರ ಗೋಳಿಕಟ್ಟೆಯಲ್ಲಿ ಬಲಕ್ಕೆ ತಿರುಗಿದಾಗ ಗರಡಿಯ ಸ್ವಾಗತ ಗೋಪುರ ಕಾಣಸಿಗುವುದು. ಅಲ್ಲಿಂದ ಸುಮಾರು 1. ಕಿ.ಮೀ.ಒಳಗೆ ಸಾಗಿದಾಗ ಮುಗ್ಗೇರಿ ಗರೋಡಿ ಸಿಗುವುದು.
ಇದು ಆಯದ ಗರೋಡಿ. ಗರೋಡಿಯ ಮುಖ್ಯದ್ವಾರ ಪೂರ್ವಾಭಿಮುಖವಾಗಿದ್ದು ಪಡುವಣ ದಿಕ್ಕಿಗೆ ಇನ್ನೊಂದು ದ್ವಾರವಿದೆ.
ಬ್ರಹ್ಮ ಗುಡಿಯಲ್ಲಿ ಬ್ರಹ್ಮರ ಗುಂಡದ ಒಳಗೆ ಪಂಚಲೋಹಕ್ಕೆ ಬೆಳ್ಳಿ ಹೊದಿಸಿದ ಅಶ್ವಾರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಿನ ಅಂತಸ್ಥಿನಲ್ಲಿ ಗಾಳಿ ದೇವರಿಗೆ ಬೆಳ್ಳಿಯ ಪೀಠ, ಪೀಠದ ಮೇಲೆ ಕೂಚಿಯಲ್ಲಿ ನೀರಿಟ್ಟು ಆರಾಧನೆ ಸಲ್ಲುತ್ತದೆ. ಗುಂಡದ ಎಡಭಾಗದಲ್ಲಿ ಮಣೆಮಂಚದಲ್ಲಿ ಕೋಟಿಚೆನ್ನಯರ ಹಾಗೂ ಕುಜುಂಬ ಕಾಂಜವರಿಗೆ ಮಣೆ ಮಂಚದ ಮೇಲೆ ಮೂರು ಸುರಿಯ ಎರಡು ಬಿಲ್ಲುಗಳನ್ನು ಇಟ್ಟು ಆರಾಧನೆ ಇದೆ. ಮಣೆ ಮಂಚದ ಕೆಳಗೆ ಇಬ್ಬರು ಮಕ್ಕಳ ಪ್ರತೀಕವಾಗಿ ಮರದ ಪೀಠದ ಮೇಲೆ ಎರಡು ಗಿಂಡೆಗಳನ್ನು ಇಡಲಾಗಿದೆ.
ಗುಂಡದ ಬಲಭಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳರಿಗೆ ಪೂಜೆ ಸಲ್ಲುತ್ತದೆ.
ಬ್ರಹ್ಮ ಗುಡಿಯ ಹೊರಗೆ ಬೇರೆ ಬೇರೆ ಮಣೆ ಮಂಚಗಳಲ್ಲಿ ಜುಮಾದಿಯ ಬೆಳ್ಳಿಯ ಬಂಗಾರದ ನಾಲಗೆಯ ಮುಖ, ಪಂಜುರ್ಲಿಯ ಬೆಳ್ಳಿಯ ಮುಖ, ಮಾಯಂದಾಲ್ ಬೆಳ್ಳಿಯ ಕೊಡೆ, ಬೆತ್ತ, ಕುಲತ ಜುಮಾದಿಗೆ ಗಿಂಡೆ, ಜೋಗಿಪುರುಷರಿಗೆ ಗಿಂಡೆಯನ್ನು ಹಾಗೂ ನವಿಲುಗರಿಯ ಗುಚ್ಚವನ್ನಿಟ್ಟು ಆರಾಧನೆಯೂ ಇದೆ. ಒಳಗೆ ಗುರು ಕಂಬದ ಆರಾಧನೆಯೂ ಇದೆ.
ಗರೋಡಿಯ ಆವರಣದೊಳಗೆ ಗುಡಿಯಲ್ಲಿ ಮಣೆ ಮಂಚದಲ್ಲಿ ಗಿಂಡೆಯನ್ನಿಟ್ಟು ಪಿಲ್ಚಂಡಿಗೆ ಪೂಜೆ ನಡೆಯುತ್ತದೆ. ಅಯ್ಯಕಲ್ಲು ಹಾಗೂ ತುಳಸಿಕಟ್ಟೆಗಳೂ ಇವೆ.
ಗರೋಡಿಗೆ ತೆಂಕು ಬದಿಯಲ್ಲಿ ಸುಮಾರು 150 ಮೀಟರ್ ದೂರದಲ್ಲಿ ನಾಗಬನ, ಬ್ರಹ್ಮರಗುಡಿ, ನಂದಿಗೋಣ, ಕ್ಷೇತ್ರಪಾಲ, ಬ್ರಹ್ಮ ಸಾನದ ಆವರಣದ ಹೊರಗೆ ಬೊಬ್ಬರ್ಯ ಗುಂಡವೂ ಇದೆ.
ಹಾವಂಜೆ, ಬೆಳ್ಳಂಪಳ್ಳಿ ಹಾಗೂ ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ, ಬಜೆ, ಮಡಿ, ಕಂಬಳಿಬೆಟ್ಟು, ಕೀಳಿಂಜೆ, ಪರಾರಿ, ಪುಂಚೂರು, ಕೀರ್ತಿಬೈಲು, ಇರ್ಮಡಿ, ಮೊದಲಾದ ಊರುಗಳು ಕೂಡುಕಟ್ಟಿಗೆ ಸೇರಿವೆ. ಗರೋಡಿಯಲ್ಲಿ ಮಂಗಳವಾರ ಮತ್ತು ಆದಿಯವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಂದರೆ ಡಿಸೆಂಬರ್ 5 ಹಾಗೂ 6ನೇ ತಾರೀಕಿನಂದು ಹಾಲುಹಬ್ಬ(ಅಗೆಲ್) ಸೇವೆ ನಡೆಯುತ್ತದೆ. ಸುಗ್ಗಿ ತಿಂಗಳ ಏಪ್ರಿಲ್ 1, 2, 3ನೇ ತಾರೀಖಿನಂದು ಅಗೆಲ್, ನೇಮ, ಶುದ್ದದ ಅಗೆಲ್, ಹಾಗೂ ಇತರ ದೈವಗಳಾದ ಜುಮಾದಿ, ಪಂಜುರ್ಲಿ, ಮಾಯಂದಾಲ್, ಹಾಗೂ ಜೋಗಿಪುರುಷರ ಕೋಲ ಸೇವೆಯೂ ನಡೆಯುತ್ತದೆ. ಗರೋಡಿಯ ಹರಕೆ ರೂಪದಲ್ಲಿ ಕಂಚಿಲ್ ಸೇವೆ, ನೀರುಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಾಗಿ ನಡೆಯುತ್ತವೆ.
ಗರೋಡಿಗೆ ಸ್ಥಿರ ಆದಾಯ ಇಲ್ಲದ ಕಾರಣ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವಂತಿಗೆ, ಸಹಾಯಧನಗಳಿಂದಲೇ ಭರಿಸುತ್ತಾರೆ. ಇತ್ತೀಚೆಗೆ 26-03-2024ರಂದು ಗರೋಡಿಯು ಜೀರ್ಣೋದ್ದಾರಗೊಂಡಿದೆ.

ಭೋಜು ಪೂಜಾರಿ

ಮುಗ್ಗೇರಿ ಗರಡಿಮನೆ ಭೋಜು ಪೂಜಾರಿ (65 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಕಾಡ್ಯ ಪೂಜಾರಿ, ತುಕ್ರ ಪೂಜಾರಿ, ಮೊದಲಾದ ಹಿರಿಯರು ಪೂ ಪೂಜನೆಯವರಾಗಿದ್ದರು.
ಪಡುಮನೆ ಸುಧಾಕರ ಶೆಟ್ಟಿ ಇವರು ಗರೋಡಿಯ ಆಡಳಿತ ಮೊಕ್ತೇಸರರಾಗಿದ್ದಾರೆ.
ಸದ್ಯ ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಭೋಜು ಪೂಜಾರಿ ಹಾಗೂ ತೊಗ್ಗು ಪೂಜಾರಿಯವರು ಸ್ಥಳ ಪಾತ್ರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ. ಇವರಿಗೂ ಮೊದಲು ಹಿರಿಯರಾದ ಕರಿಯ ಪೂಜಾರಿ, ಕಾಡ್ಯ ಪೂಜಾರಿ, ತುಕ್ರ ಪೂಜಾರಿ, ಕುಯಿಂತ್ರ ಪೂಜಾರಿ, ಚಂದು ಪೂಜಾರಿಯವರು ದರ್ಶನ ಪಾತ್ರಿಗಳಾಗಿದ್ದರು.
ನೃತ್ಯ ವಿಶಾರದರಾಗಿ ನರಸಿಂಹ ಪರವ ಚೇರ್ಕಾಡಿ, ಮಡಿವಾಳರಾಗಿ ಗೋಪಾಲ ಮಡಿವಾಳ, ಗಣೇಶ ಮಡಿವಾಳ, ಹಾಗೂ ರಾಜು ಮಡಿವಾಳ ಮುಗ್ಗೇರಿ ಇವರು ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮುಗ್ಗೇರಿ,
ಗರಡಿಬೆಟ್ಟು,
ಹಾವಂಜೆ ಗ್ರಾಮ ಮತ್ತು ಅಂಚೆ.
ಉಡುಪಿ ತಾಲೂಕು – 576124.

ಪೂ ಪೂಜನೆಯವರ ವಿಳಾಸ:

ಭೋಜು ಪೂಜಾರಿ,
ಮುಗ್ಗೇರಿ ಗರಡಿ ಮನೆ, ಗರಡಿಬೆಟ್ಟು,
ಹಾವಂಜೆ ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು – 576124.
ಮೊಬೈಲ್: 9740738730

ಆಡಳಿತ ಮೊಕ್ತೇಸರರ ವಿಳಾಸ:

ಪಡುಮನೆ ಸುಧಾಕರ ಶೆಟ್ಟಿ,
ಪಡುಮನೆ, ಮುಗ್ಗೇರಿ ಹಾವಂಜೆ ಗ್ರಾಮಮತ್ತು ಅಂಚೆ,
ಉಡುಪಿ ತಾಲೂಕು – 576124

ಮಾಹಿತಿ ಸಂಗ್ರಹಿಸಿದ ದಿನಾಂಕ:

14-11-2022