Baidhashree

Shree Brahma Baidarkala Garodi, Adve

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಡ್ವೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 66ರ ಮೂಲಕ ಪಡುಬಿದ್ರಿ ತಲುಪಿ, ಪಡುಬಿದ್ರಿ ಕಾರ್ಕಳ ರಸ್ತೆಗೆ ಎಡಕ್ಕೆ ತಿರುಗಿ ಸುಮಾರು 5.28ಕಿ.ಮೀ. ಸಾಗಿದಾಗ ರಸ್ತೆಯ ಬಲಬದಿಯಲ್ಲಿದೆ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ.
ಇದು ಆಯದ ಗರೋಡಿಯಾಗಿದ್ದು 3 ದ್ವಾರಗಳಿವೆ. ಮುಖ್ಯದ್ವಾರ ಪೂರ್ವಾಭಿಮುಖವಾಗಿದ್ದು ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಉಳಿದೆರಡು ದ್ವಾರಗಳಿದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಆಟಿ ತಿಂಗಳಲ್ಲಿ ಅಗೆಲು ಸೇವೆ ನಡೆಯುವ ಆರು ಗರೋಡಿಗಳಲ್ಲಿ ಇದೂ ಒಂದು. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಅಡ್ಡೆಯ ಚೆಕ್ ಪಾದೆಯಲ್ಲಿ ಮೂಡ್ರಗುತ್ತಿನ ಯಜಮಾನರನ್ನು ಕರೆದಾಗ ಅವರು ಅಸಡ್ಡೆ ತೋರಿಸಿ ತಾನು ಬರದೆ ಮನೆ ಹೆಂಗಸರನ್ನು ಕಳುಹಿಸಿದ್ದರಿಂದ ಆ ಮನೆಯಲ್ಲಿ ಹೆಣ್ಣು ಸಂತಾನವೇ ಆಗುವಂತೆ ಶಾಪಗ್ರಸ್ತವಾಯಿತಂತೆ. ಆ ರಾತ್ರಿ ಯಜಮಾನನ ಕನಸಿನಲ್ಲಿ ಬಂದು ಕೋಟಿಚೆನ್ನಯರು ಆದೇಶವಿತ್ತಂತೆ ತೆಂಗಿನ ಕಾಯಿ ಹಾರಿಸಿ ಅದು ಬಿದ್ದ ಜಾಗದಲ್ಲಿ ಗರೋಡಿ ಕಟ್ಟುವಂತೆ ನಿರ್ಧರಿಸಲಾಯಿತು. ಆದರೆ ತೆಂಗಿನ ಕಾಯಿ ಬಿದ್ದ ಸ್ಥಳದಲ್ಲಿ 101 ನಾಗನ ಕಲ್ಲುಗಳಿದ್ದವು. 101 ಕಲ್ಲುಗಳನ್ನು ನೀರಿಗೆ ಹಾಕಿಸಿ ಒಂದು ಕಲ್ಲನ್ನು ಸ್ಥಳಾಂತರಿಸಿದ ನಾಗಬನದಲ್ಲಿಟ್ಟು ಪೂಜಿಸಿದ ನಂತರ ಗರೋಡಿ ಕಟ್ಟಲಾಯಿತು. ಇಂದಿಗೂ ಆ ನಾಗ ಬನದಲ್ಲಿ ನಾಗನ ಕಲ್ಲು ಒಂದೇ ಇದ್ದು ಹೆಚ್ಚಿಗೆ ಕಲ್ಲು ಹಾಕುವಂತಿಲ್ಲ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಬಂಗಾರ ಮುಚ್ಚಿದ ಪಂಚ ಲೋಹದ ಬಂಗಾರದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರ ಹಾಗೂ ಜೋಗಿಪರುಷರ ಆರಾಧನೆಯಿದೆ
ಗುಂಡದ ಬಲಭಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳ, ಕುಜುಂಬ ಕಾಂಜವರ ಆರಾಧನೆಯಿದೆ,
ಬ್ರಹ್ಮ ಗುಡಿಯ ಹೊರಗೆ ಮಣೆ ಮಂಚದಲ್ಲಿ ಪಿಲ್ಚಂಡಿ ಹಾಗೂ ಮಾಯಂದಾಲ್ ದೈವಗಳಿಗೆ ಪೂಜೆ ಸಲ್ಲುತ್ತದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನ ಹಾಗೂ ಬ್ರಹ್ಮ ಸ್ಥಾನಗಳಿವೆ.

ರಾಮ ದಾದು ಪೂಜಾರಿ

ಸದಾನಂದ ಯಾನೆ ಪಕ್ಕು ಪೂಜಾರಿ

ರಾಮ ದಾದು ಪೂಜಾರಿ(72 ವರ್ಷ) ಇವರು ಗರೋಡಿಮನೆ ಮುಖ್ಯಸ್ಥರು. ಗರೋಡಿ ಮನೆಯ ಸದಾನಂದ ಯಾನೆ ಪಕ್ಕು ಪೂಜಾರಿ ಇವರು ಪೂ ಪೂಜನೆಯವರು. ಇವರಿಗೆ ಮೊದಲು ರಾಮ ದಾದು ಪೂಜಾರಿಯವರು ಪೂ ಪೂಜನೆ ಸೇವೆ ಮಾಡಿದ್ದು ಅವರಿಗೂ ಮೊದಲು ಹಿರಿಯರಾದ ರಾಘು ಪೂಜಾರಿ, ತೆನ್ನಯ ಪೂಜಾರಿ, ಸೇವೆ ಮಾಡಿದ್ದರು.

ಬೈದ್ಯರ ದರ್ಶನದ ಸ್ಥಳ ಪಾತ್ರಿಗಳು ಸದ್ಯ ಈ ಗರೋಡಿಯಲ್ಲಿ ಇಲ್ಲ. ಹಿಂದೆ ಚೆನ್ನು ಪೂಜಾರಿಯವರು ದರ್ಶನದ ಸ್ಥಳ ಪಾತ್ರಿಗಳಾಗಿದ್ದರು.

ಗರೋಡಿಗೆ ಆಡಳಿತ ಸಮಿತಿಯಿದ್ದು ಸುಂದರ ಸುವರ್ಣ ಇವರು ಅಧ್ಯಕ್ಷರಾಗಿಯೂ, ನವೀನ್ಚಂದ್ರ ಸುವರ್ಣ ಇವರು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪಲಿಮಾರು, ನಂದಿಕೂರು, ಅವರಾರು ಪೊಯ್ಯ ಹಾಗೂ ಅಡ್ಡೆ ಗ್ರಾಮಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ, ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುವುದು.

20-05-1998ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದ್ದು 1960ರಲ್ಲಿಯೂ ಜೀರ್ಣೋದ್ಧಾರವಾಗಿತ್ತು.

ಚೇರ್ಕಾಡಿ ನರಸಿಂಹ ಪರವ ಸಂಗಡಿಗರು, ನೃತ್ಯ ವಿಶಾರದರಾಗಿ, ಅನಿಲ್ ಮಡಿವಾಳ, ಇವರು ಮಡಿವಾಳರಾಗಿ, ಅಬ್ದುಲ್ ಕರೀಂ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಅಡ್ವೆ ಗರೋಡಿ ಭಜನಾ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು ಪ್ರತೀ ಶನಿವಾರ ಭಜನೆ, ಪೂಜೆಗಳು ನಡೆಯುತ್ತವೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ,
ನಂದಿಕೂರು ಅಂಚೆ, ಕಾಪು ತಾಲೂಕು,
ಉಡುಪಿ 574111.

ಗರೋಡಿ ಮನೆ ವಿಳಾಸ:

‘’ಬೈದಶ್ರೀ ”ಅಡ್ವೆ,
ನಂದಿಕೂರು ಅಂಚೆ,
ಕಾಪು ತಾಲೂಕು,
ಉಡುಪಿ 574111.
ಮೊಬೈಲ್: ರಾಮದಾದು ಪೂಜಾರಿ – 9902212950
ಮೊಬೈಲ್: ಸದಾನಂದ ಪೂಜಾರಿ – 9980947120

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024