ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಎಲ್ಲೂರು
ಉಡುಪಿಯಿಂದ ಎನ್.ಎಚ್. 66ರಲ್ಲಿ ಕಾಪು ಉಚ್ಚಿಲ ಮಾರ್ಗವಾಗಿ ಉಚ್ಚಿಲ ಮಹಾಲಕ್ಷಿ ದೇವಸ್ಥಾನದ ಹತ್ತಿರ ಎಡಕ್ಕೆ ಪಣಿಯೂರು ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿದಾಗ ಎಲ್ಲೂರು ಶ್ರೀ ಮಹೋತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಎಲ್ಲೂರು ಗರೋಡಿ ಇದೆ.




ಈ ಗರೋಡಿಯು ಆಯದ ಗರೋಡಿಯಾಗಿದ್ದು ಮೂರು ಬಾಗಿಲುಗಳವೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೆರಡು ದ್ವಾರಗಳು ಪಶ್ಚಿಮ ಹಾಗೂ ಉತ್ತರಾಭಿಮುಖವಾಗಿದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯಲ್ಲಿದೆ.

ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಕವಚ ಹೊದಿಸಿದ ಕುದುರೆಯೇರಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಕೂಚಿ ಇದೆ.

ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಹಾಗೂ ಜೋಗಿ ಪುರುಷರ ಮಣೆ ಮಂಚ ಇದೆ.

ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಮಣೆ ಮಂಚ ಇದೆ.

ಬ್ರಹ್ಮ ಗುಡಿಯ ಹೊರಗೆ ಬಲ ಭಾಗದಲ್ಲಿ ಕೊಡಮಣಿತ್ತಾಯ ಹಾಗೂ ಬಂಟ ದೈವಗಳ ಮಣೆ ಮಂಚವಿದೆ.

ಬ್ರಹ್ಮಗುಡಿಯ ಎದುರಿಗೆ ಗುರುಕಂಭವಿದೆ.


ಗರೋಡಿಯ ಆವರಣದೊಳಗಿರುವ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ.

ಆವರಣದೊಳಗಿನ ಇನ್ನೊಂದು ಗುಡಿಯಲ್ಲಿ ಜಾರಂದಾಯ ಮತ್ತು ಬಂಟ, ಜುಮಾದಿ, ನಂದಿಗೋಣ, ಮೈಸಂದಾಯ, ಪಂಜುರ್ಲಿ, ಕುಕ್ಕಿನಂತಾಯ ದೈವಗಳ ಮಣೆ ಮಂಚವಿದೆ. ಪಕ್ಕದ ಇನ್ನೊಂದು ಗುಡಿಯಲ್ಲಿ ಹುಲಿ ಚಾಮುಂಡಿ ದೈವದ ಮಣೆ ಮಂಚವಿದೆ.

ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗ ಬನವಿದೆ.
ಹಿಂದೆ ಒಂದು ಕಾಲದಲ್ಲಿ ಕೋಟಿಚೆನ್ನಯರಿಗೆ ಮರದ ಪಾಪೆ ಮಾಡಿಸ ಬೇಕೆಂದು ಊರವರು ಮರವೊಂದನ್ನು ಗುರುತಿಸಿ ಕಡಿಯಲು ಗಂಧ ಹಾಕಿ ಪ್ರಾರ್ಥನೆ ಮಾಡಲು ಮುಂದಾದಾಗ ಮೊದಲು ಮರ ಕೊಡಲು ಒಪ್ಪಿದ ಮನೆಯವರು ಮರವನ್ನು ಕೊಡಲಾಗುವುದಿಲ್ಲ ಎಂದರಂತೆ. ನಂತರ ಬೈದೇರುಗಳು ದರ್ಶನದಲ್ಲಿ ಇನ್ನು ಮುಂದೆ ಈ ಗರೋಡಿಯಲ್ಲಿ ಯಾವ ಶಕ್ತಿಗಳಿಗೂ ಮರದ ಪಾಪೆ ಮಾಡಿಸ ಬಾರದಾಗಿ ಅಪ್ಪಣೆ ಮಾಡಿದರು. ಹಾಗಾಗಿ ಹೊರಗಿನ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿಗೆ ಬಿಟ್ಟರೆ ಗರೋಡಿಯೊಳಗೆ ಯಾವ ಶಕ್ತಿಗಳಿಗೂ ಮರದ ಪಾಪೆಗಳಿಲ್ಲ.

ಕರುಣಾಕರ ಪೂಜಾರಿ
1990ರಿಂದ ಕರುಣಾಕರ ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಅಜ್ಜ ಮೋನಪ್ಪ ಪೂಜಾರಿ, ಅದಕ್ಕೂ ಮೊದಲು ಪಕೀರ ಪೂಜಾರಿಯವರು ಸೇವೆ ಮಾಡಿದ್ದರು. ಈಗ ಬೈದರ ದರ್ಶನಕ್ಕೆ ಈ ಗರೋಡಿಯಲ್ಲಿ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಅಣ್ಣಪ್ಪ ಪೂಜಾರಿ, ಬೊಳ್ಳು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಎಲ್ಲೂರು ಗುತ್ತು ಪ್ರಪುಲ್ಲ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯವೂ ದೀಪ ಹಚ್ಚುತ್ತಾರೆ. ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆಗಳು ನಡೆಯುತ್ತವೆ. ಎಳ್ಳಮಾವಾಸ್ಯೆಯ 6ನೇ ದಿನ ಅಗೆಲು ಸೇವೆ, 7ನೇ ದಿನ ಬೈದೇರುಗಳ ನೇಮ, ಜೋಗಿಪುರುಷ, ಮಾಯಂದಾಲ್ ಕೋಲ, ವರ್ಷಂಪ್ರತಿ ನಡೆಯುತ್ತದೆ. ಬೇಷ ತಿಂಗಳಲ್ಲಿ ಗರಡಿಯಿಂದ ಭಂಡಾರ ಹೋಗಿ ಗರೋಡಿ ಮನೆಯಲ್ಲಿ ಮಾಯಂದಾಲ್ಗೆ ಅಗೆಲು ಸೇವೆ ನಡೆಯುತ್ತದೆ.
ಕುಂಜೂರು, ಎಲ್ಲೂರು, ಮಾಣಿಯೂರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಈ ಊರುಗಳ ಜನರು ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
1980ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಸಂತು ಪರವ, ಬೊಗ್ಗು ಪರವ,ಮೂಡುಬೆಳ್ಳೆ, ಜಯ ಪರವ ನೀರೆ, ಇವರು ಈ ಗರೋಡಿಯ ನೃತ್ಯ ವಿಶಾರದರು. ರಮೇಶ್ ಮಡಿವಾಳ, ಎಲ್ಲೂರು ಇವರು ಮಡಿವಾಳರಾಗಿ, ಲಕ್ಷಣ ಸೇರಿಗಾರ ಎಲ್ಲೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಎಲ್ಲೂರು ಅಂಚೆ,
ಕಾಪು ತಾಲೂಕು,
ಉಡುಪಿ 574113.
ಎಲ್ಲೂರು ಅಂಚೆ,
ಕಾಪು ತಾಲೂಕು,
ಉಡುಪಿ 574113.
ಪೂಪೂಜನೆಯವರು
ಕರುಣಾಕರ ಪೂಜಾರಿ,
ಮೊಬೈಲ್: 8088107896
ಮೊಬೈಲ್: 8088107896
ಮಾಹಿತಿ ಸಂಗ್ರಹಿಸಿದ ದಿನಾಂಕ:
22-11-2024