Baidhashree

Shree Brahma Baidarkala Hosa Garodi, Paniyoor

ಶ್ರೀ ಬ್ರಹ್ಮ ಬೈದರ್ಕಳ ಹೊಸ ಗರೋಡಿ ಪಣಿಯೂರು

ಉಡುಪಿಯಿಂದ ಕಾಪು – ಉಚ್ಚಿಲ ಮಾರ್ಗವಾಗಿ, ಉಚ್ಚಿಲ ಮಹಾಲಕ್ಷಿ ದೇವಸ್ಥಾನದ ಹತ್ತಿರ ಎಡಕ್ಕೆ ತಿರುಗಿ ಪಣಿಯೂರು ರಸ್ತೆಯಲ್ಲಿ ಸುಮಾರು 3ಕಿ.ಮೀ. ಸಾಗಿದರೆ ಈ ಗರೋಡಿಯು ಸಿಗುವುದು.
ಪಣಿಯೂರು ಆದಿಗರೋಡಿಯಲ್ಲಿ ನಡೆದ ವಿವಾದವೊಂದರ ಪರಿಣಾಮ ವಿಭಜನೆಗೊಂಡು 1947ನೇ ಇಸವಿಯಲ್ಲಿ ಹತ್ತಿರದಲ್ಲಿಯೇ ಸ್ಥಾಪನೆಗೊಂಡ ಗರೋಡಿ ಇದು. ಇದೊಂದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ದ್ವಾರವು ಬಡಗು ದಿಕ್ಕಿಗೂ ಇದೆ.
ಗರೋಡಿಯ ಬ್ರಹ್ಮರ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಮುಚ್ಚಿದ ಅಶ್ವಾರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿದೇವರ ಪಂಚಲೋಹದ ಮೂರ್ತಿ ಇದೆ.
ಗುಂಡದ ಎಡಭಾಗದ ಮಣೆಮಂಚದಲ್ಲಿ ಕೋಟಿಚೆನ್ನಯರಿಗೆ ಕಲಶ ಇಟ್ಟು ಪೂಜಿಸುತ್ತಾರೆ.
ಗುಂಡದ ಬಲಭಾಗದಲ್ಲಿ ಮಣೆಮಂಚದಲ್ಲಿ ಒಕ್ಕುಬಲ್ಲಾಳ ಮತ್ತು ಕುಜುಂಬ ಕಾಂಜವ ಹಾಗೂ ಇನ್ನೆರಡು ಮಣೆಮಂಚಗಳ ಆರಾಧನೆ ಇದೆ.
ಬ್ರಹ್ಮಗುಡಿಯ ಹೊರಗೆ ಬಲಭಾಗದಲ್ಲಿ ಗಣಪತಿ ಹಾಗೂ ಮಣೆಮಂಚದಲ್ಲಿ ಜೋಗಿಪುರುಷರಿಗೂ, ಬಲಬದಿಯಲ್ಲಿ ಮಣೆಮಂಚದಲ್ಲಿ ಜಾರಂದಾಯ ಹಾಗೂ ಬಂಟ ದೈವಗಳಿಗೆ ಆರಾಧನೆ ಇದೆ.
ಗರೋಡಿಯ ಒಳಗೆ ಗುರುಕಂಬಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮ ಸ್ಥಾನದಲ್ಲಿ ಪಂಚದೈವಗಳ ಸಾನಿಧ್ಯವಿದೆ.
ಇನ್ನೊಂದು ಸಣ್ಣ ಗುಡಿಯಲ್ಲಿ ಲೆಕ್ಕೆಸಿರಿದೈವ, ಅಯ್ಯಕಲ್ಲು ಹಾಗೂ ತುಳಸೀಕಟ್ಟೆಗಳಿವೆ.

ಶಿವ ಪೂಜಾರಿ

ಗರೋಡಿಮನೆ ಶಿವ ಪೂಜಾರಿ(65ವರ್ಷ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಹಿಂದೆ ಇವರ ಮಾವ ಚಂದು ಪೂಜಾರಿಯವರು ಪೂ ಪೂಜನೆಯವರಾಗಿದ್ದರು. ಚಂದು ಪೂಜಾರಿಯವರು ಇಲ್ಲಿಯ ದರ್ಶನ ಪಾತ್ರಿಯಾಗಿಯೂ ಇದ್ದರು. ಸದ್ಯ ಈ ಗರೋಡಿಯಲ್ಲಿ ಬೈದ್ಯರ ದರ್ಶನದ ಸ್ಥಳ ಪಾತ್ರಿ ಇಲ್ಲ.
ಪೆರಾರ್ದೆ ಹುಣ್ಣಿಮೆಯ ಪಂಚಮಿಯಂದು ಗರೋಡಿಯಲ್ಲಿ ಗರಡಿ ಮನೆಯವರಿಂದ ಅಗೆಲು ಸೇವೆ, ಮರುದಿನ ಬೈದೇರುಗಳ ನೇಮೋತ್ಸವ, ಮರುದಿನ ಜೋಗಿಪುರುಷ ಹಾಗೂ ಮಾಯಂದಾಲ್ ದೈವಗಳ ಕೋಲ ಸೇವೆ ಹಾಗೂ ಪಣಿಯೂರು ಗುತ್ತಿನವರಿಂದ ಶುದ್ಧದ ಅಗೆಲ್ ಸೇವೆ ನಡೆಯುತ್ತದೆ. ಪಣಿಯೂರು ಆದಿ ಗರೋಡಿಯಂತೆ ಈ ಗರೋಡಿಯಲ್ಲೂ ಆಟಿ ತಿಂಗಳ ಅಗೆಲ್ ಸೇವೆ ನಡೆಯುತ್ತದೆ.
ಬೆಳಪು ಹಾಗೂ ಪಣಿಯೂರು ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದಾರೆ. ಊರ ಜನರು ನೀರುಸ್ನಾನ, ಕಂಚಿಲ್ ಸೇವೆ ಮದುವೆ ಮುಂತಾದ ಶುಭ ಸಂಧರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಸಂತೋಷ ಪರವ ನೀರೆ ಬೈಲೂರು ಮತ್ತು ಸಂಘಟಿಗರು ಗರೋಡಿಯ ನೃತ್ಯ ವಿಶಾರದರಾಗಿ, ಭುಜಂಗ ಮಡಿವಾಳ, ಉದ್ಯಾವರ ಇವರು ಮಡಿವಾಳರಾಗಿ, ರಸೂಲ್ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಹೊಸಗರೋಡಿ,
ಬೆಳಪು ಗ್ರಾಮ, ಪಣಿಯೂರು ಅಂಚೆ,
ಕಾಪು ತಾಲೂಕು, ಉಡುಪಿ 574117.

ಪೂಪೂಜನೆಯವರು:

ಶಿವ ಪೂಜಾರಿ,
ಶ್ರೀ ಬ್ರಹ್ಮ ಬೈದರ್ಕಳ ಹೊಸ ಗರೋಡಿ ಮನೆ,
ಬೆಳಪು ಗ್ರಾಮ, ಪಣಿಯೂರು ಅಂಚೆ,
ಕಾಪು ತಾಲೂಕು, ಉಡುಪಿ 574117.
ಮೊಬೈಲ್: 7349420565.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Pakkibettu Shree Brahma Baidarkala Garodi

ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ

ಉಡುಪಿಯಿಂದ ಕಲ್ಯಾಣಪುರ ಸಂತೆಕಟ್ಟೆ ಕಡವಿನ ಬಾಗಿಲು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ಸಾಗಿ ಬಲಕ್ಕೆ ತಿರುಗಿ ಕಾಡಿನ ರಸ್ತೆಯಲ್ಲಿ ಮುಂದುವರಿದು ಗರೋಡಿ ತಲುಪಬಹುದು. ಗರೋಡಿಯು ಪ್ರಕೃತಿ ರಮಣೀಯ ಸುವರ್ಣಾ ನದೀ ತಟದಲ್ಲಿದೆ.
ಇದು ಆಯದ ಗರೋಡಿಯಾಗಿದ್ದು ಇಲ್ಲಿ ಷಡಾಧಾರ ಪ್ರತಿಷ್ಠೆ ಆಗಿದೆ.
1983ರಿಂದ ಇಲ್ಲಿ ಶ್ರೀ ಮೋಹನ್ ಪೂಜಾರಿಯವರು ಪೂ ಪೂಜನೆದಾರರಾಗಿದ್ದಾರೆ. 1955ರಿಂದ 1983ರವರೆಗೆ ಮೋಹನ್ ಪೂಜಾರಿ ಅವರ ತಂದೆ ಅನಂತ ಪೂಜಾರಿ ಪೂ ಪೂಜನೆಯವರಾಗಿದ್ದರು. 1955ರ ಮೊದಲು ಅನಂತ ಪೂಜಾರಿ ಅವರ ಮಾವ ಪಿಜಿನ ಪೂಜಾರಿಯವರು ಪೂಜನೆಯವರಾಗಿದ್ದರು.
ಪಕ್ಕಿಬೆಟ್ಟು ಗರೋಡಿಯಲ್ಲಿ ಶ್ರೀ ಸತೀಶ್ ಪೂಜಾರಿ ಹಾಗೂ ಶಂಕರ ಪೂಜಾರಿ ಸ್ಥಳ ಪಾತ್ರಿಗಳಾಗಿದ್ದಾರೆ. ಇವರು ಸೇವೆಗೆ ಬರುವ ಮೊದಲು ಗುರುವ ಪೂಜಾರಿ ಹಾಗೂ ಚಂದು ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು
ಇಲ್ಲಿ ಆಡಳಿತ ಸಮಿತಿಯು ಗರೋಡಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ
ಸುಮಾರು 400 ವರ್ಷಗಳ ಹಿಂದೆ ಪಕ್ಕಿಬೆಟ್ಟು ಗರೋಡಿಯನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಗರೋಡಿಯ ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಮೊದಲು ಇಲ್ಲಿ ಪಕ್ಕಿಬೆಟ್ಟು ಪಂಜುರ್ಲಿ ಸಾನ್ನಿಧ್ಯವಿತ್ತು. ಈ ಊರಿನಲ್ಲಿ ಒಂದು ಗರೋಡಿ ಸ್ಥಾಪಿಸಬೇಕು ಎಂದು ಇಲ್ಲಿಗೆ ಕೋಟಿ ಚೆನ್ನಯರು ಬಂದಿದ್ದರು. ಅವರು ಇಲ್ಲೇ ಹತ್ತಿರದ ವೀರಭದ್ರ ದೇವಸ್ಥಾನದ ಬಳಿಯ ಕಟ್ಟೆಯಲ್ಲಿ ಕುಳಿತು ಗೆಂದಾಳಿ ಸೀಯಾಳವನ್ನು ಕತ್ತಿಯಿಂದ ಕೆತ್ತುವಾಗ ಒಂದು ಕೆತ್ತೆ “ಪಂಜುರ್ಲಿ”ಮಹಿಮೆಯಿಂದ ಹಕ್ಕಿಯಂತೆ ಹಾರಿ ಬಂದು ಇಲ್ಲಿ ಬಿತ್ತು. ಅದನ್ನು ಕಂಡ ಹಿರಿಯರು ಇಲ್ಲೇ ಗರೋಡಿ ಕಟ್ಟಲು ನಿರ್ಧರಿಸಿದರು. ಈ ಗರೋಡಿಯಲ್ಲಿ ಪಂಜುರ್ಲಿಗೆ ವಿಶೇಷ ಸ್ಥಾನಮಾನವಿದೆ.
ಗುಂಡದ ಒಳಗೆ ಬ್ರಹ್ಮರಮೂರ್ತಿ, ಗಾಳಿ ದೇವರು. ಎಡಭಾಗದಲ್ಲಿ ಕೋಟಿ ಚೆನ್ನಯರ ಆಳೆತ್ತರದ ಪಾಪೆ, ಬಲಭಾಗದಲ್ಲಿ ಕುಜುಂಬ ಕಾಂಜವನ ಪಾಪೆ, ಮೈಸಂದಾಯ ಪಂಚಲೋಹದ ಮುಖ ಇದೆ. ಗುಂಡದ ಹೊರಗೆ ವಾಲಗ ಚಾವಡಿಯಲ್ಲಿ ಅಣ್ಣಪ್ಪ ಪಂಜುರ್ಲಿ ಮೂರ್ತಿ, ಕುಲತ ಜುಮಾದಿ ಮುಂಡಿಗೆ, ಮಾಯಂದಾಳ್ ಮತ್ತು ಮಗುವಿನ ಪಾಪೆ, ಕತ್ತರಿಮಂಚದಲ್ಲಿ ಕೊಡಂಗ ಪಂಜುರ್ಲಿ, ಗುರುಕಂಬ ಹಾಗೂ ಜೋಗಿ ಪುರುಷ ಪಾಪೆ ಇದೆ.
ಈ ಗರೋಡಿಯಲ್ಲಿ ನಿತ್ಯ ದೀಪ ಹಚ್ಚುತ್ತಾರೆ. ಆದಿತ್ಯವಾರ-ವಿಶೇಷ ಪೂಜೆ, ಮಂಗಳವಾರದ ಪೂಜೆ ಇದೆ. ಉಳಿದಂತೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ದೀಪಕಂಬ ಇಟ್ಟು ಬಲಿಯೇಂದ್ರನನ್ನು ಕರೆಯುವ ಕ್ರಮ ಇದೆ. ಹೂವಿನ ಪೂಜೆ, ಕದಿರುಕಟ್ಟುವುದು, ಊರುಸೇರಿ ಗಜ್ಜೆಯಿ ಸೇವೆ ಇದೆ. ಅಗೆಲ್ ಸೇವೆ ಇದೆ. ನೇಮೋತ್ಸವ ಇದೆ. ಗರೋಡಿಯ ಹೊರಗೆ ಪಂಜುರ್ಲಿಗೆ ಭೋಗ ಇದೆ.
ಪಕ್ಕಿಬೆಟ್ಟು ಗರೋಡಿಯ ಕೂಡುಕಟ್ಟಿನಲ್ಲಿ ಸುಮಾರು 1400 ಮನೆಗಳಿವೆ. ಪಕ್ಕಿಬೆಟ್ಟು, ಕಡವಿನ ಬಾಗಿಲು, ಕೊಳಂಬೆ ಮೂಡುಬೆಟ್ಟು ಅರ್ಕಳಬೆಟ್ಟು, ಪುತ್ತೂರು, ನಯಂಪಳ್ಳಿ, ತೆಂಕು ನಯಂಪಳ್ಳಿ, ಮಾವಿನಕುದ್ರು ಹೀಗೆ ಒಂಭತ್ತು ಊರುಗಳಿವೆ. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡುಕಾಯಿ ಕಾಣಿಕೆ ತೆಗೆದಿಡುತ್ತಾರೆ. ಅಕ್ಕಿ, ತೆಂಗಿನಕಾಯಿ, ಸೀಯಾಳ, ಪಿಂಗಾರದಲ್ಲಿ ತುಲಾಭಾರ ನಡೆಸುವುದಿದೆ. ವಿಶೇಷ ಸಂದರ್ಭದಲ್ಲಿ ಕಲಶ ಕಟ್ಟಿ ಶುದ್ಧ ಮಾಡುವ ಕ್ರಮ ಇದೆ.
ಗರೋಡಿಯ ಹೊರಗೆ ಬಾಗಿಲ ಬೊಬ್ಬರ್ಯ ಮೂರ್ತಿ ಇದೆ. ಆವರಣದಲ್ಲಿ ತನ್ನಿಮಾನಿಗ, ಅಜಕಾಯಿ ಕಲ್ಲು, ನೀಚ ದೈವವಿದೆ. ಗರೋಡಿ ಎದುರಿನಲ್ಲಿ ಹೊರಗೆ ನಾಗಬನ, ಹತ್ತಿರದಲ್ಲೇ ಕೆರೆ ಇದೆ.
ಗರೋಡಿಗೆ 13 ಸೆಂಟ್ಸ್ ಜಾಗ ಇದೆ.
ಗರೋಡಿ ಜೀರ್ಣೋದ್ಧಾರ
17-03-1927 : ಮಾಡಿಗೆ ಹಂಚು ಹಾಕಿ ಪುನರ್ಪ್ರತಿಷ್ಠೆ
03-03-1963 – ಬ್ರಹ್ಮಕಲಶ
22-04-1995 – ಜೀರ್ಣೋದ್ಧಾರ
28-04-2008 – ಜೀರ್ಣೋದ್ಧಾರ
2023-2024ರಲ್ಲಿ ಜೀರ್ಣೋದ್ಧಾರ ನಡೆಸಲು ಸಕಲ ಸಿದ್ಧತೆಗಳಾಗುತ್ತಿರುವ ಬಗ್ಗೆ 9-07-2022ರಲ್ಲಿ ಗರೋಡಿ ವಕ್ತಾರರು ತಿಳಿಸಿರುತ್ತಾರೆ.
ಈ ಗರೋಡಿಗೆ ಬೊಗ್ಗು ಪರವ, ಬೂಬ ಪರವ, ಸಂತೋಷ ಪರವ ನೃತ್ಯ ವಿಶಾರದರಾಗಿ ಸೇವೆಗೆ ಬರುತ್ತಾರೆ. ಹಿಂದೆ ನರಂಗ ಪರವ, ಬೂಬ ಪರವನ ತಂದೆ ಬೆರ್ಮು ಪರವ ನೃತ್ಯವಿಶಾರದರಾಗಿದ್ದರು.
ಗರೋಡಿಯ ಹೊರಗೆ ಪ್ರತ್ಯೇಕ ಗುಂಡವನ್ನು ಇರಿಸಲಾಗಿದ್ದು, ಇದು ಅಗೆಲು ಸೇವೆ, ನೇಮೋತ್ಸವದ ದಿನ ಉಪಯೋಗಕ್ಕೆ ಬರುತ್ತದೆ. ಅಂಗಣದಲ್ಲಿ ಇದನ್ನು ಇರಿಸಿ ಎದುರಿನಲ್ಲಿ ದಲ್ಲೆ ಹಾಕಲಾಗುವುದು. ಮೊದಲು ಭತ್ತದಲ್ಲಿ ಎರಡು ಮನುಷ್ಯಾಕೃತಿಗಳನ್ನು ನಿರ್ಮಿಸಲಾಗುವುದು. ಇದರ ಮೇಲೆ ನೀರೊಳಿಗೆ ಎಲೆಯನ್ನು ಹಾಕಲಾಗುವುದು. ಇದನ್ನು ಬಾಳೆದಿಂಡಿನ ದಪ್ಪ ಸಿಪ್ಪೆಯಿಂದ ಹೊದಿಸಲಾಗುವುದು.

ಬಾಗಿಲ ಬೊಬ್ಬರ್ಯ:-

ಅದೊಂದು ಕಾಲದಲ್ಲಿ ಪಕ್ಕಿಬೆಟ್ಟು ಗರೋಡಿಯ ಮಾಡು ಸಂಪೂರ್ಣ ಕೆಟ್ಟು ಹೋಗಿದ್ದ ಸಂದರ್ಭದಲ್ಲಿ ಅದಕ್ಕೆ ಬೇಕಾಗಿದ್ದ ಬಿದಿರನ್ನು ತರಲು ಹಿರಿಯರಾದ ಅಣ್ಣು ಪೂಜಾರಿಯವರು ಘಟ್ಟಕ್ಕೆ ಹೋಗಿದ್ದರಂತೆ. ಅವರು ಬಯಸಿದ ರೇಟಿಗೆ ಬಿದಿರು ಸಿಕ್ಕದಾಗ ವಾಪಾಸು ಬಂದು ಬೈದೇರುಗಳ ದರುಶನದಲ್ಲಿ ನಿಮಗೆ ಬೇಕಾದಲ್ಲಿ ಗರೋಡಿ ಬೀಳುವುದನ್ನು ಉಳಿಸಿಕೊಳ್ಳಿ ಅನ್ನುತ್ತಾರೆ. ಆಗ ಬೈದೇರುಗಳು ಮೂರು ಎಲೆ ಗಂಧ ತೆಗೆದುಕೊAಡು ಸುವರ್ಣಾನದಿಯಲ್ಲಿನ ಪಕ್ಕಿಬೆಟ್ಟು ಗುಂಡಿಗೆ ಹಾಕಲು ಹೇಳುತ್ತಾರೆ. ಹಾಗೆ ಮಾಡಿದಾಗ-ಅದೇ ಗುಂಡಿಯಲ್ಲಿ ಬಿದಿರಿನ ಹಿಂಡು ಮೇಲೆದ್ದು ಬಂದಾಗ ಅದರಿಂದ ಮತ್ತೆ ಗರೋಡಿ ಕಟ್ಟುತ್ತಾರೆ. ಆ ಬಿದಿರ ಹಿಂಡು ಘಟ್ಟದ್ದೇ ಆಗಿತ್ತು. ಮತ್ತೊಂದು ವಿಶೇಷವೆಂದರೆ ಆ ಬಿದಿರ ಹಿಂಡಿನೊಳಗಡೆ ಬೊಬ್ಬರ್ಯನ ಪಾಪೆ ಇತ್ತು. ಆ ಬಿದಿರನ್ನು ಬೊಬ್ಬರ್ಯನೇ ತಂದಿದ್ದು ಎಂಬ ನಂಬಿಕೆ. ಇದೇ ಬೊಬ್ಬರ್ಯ ಬಾಗಿಲು ಬೊಬ್ಬರ್ಯನಾಗಿದ್ದಾನೆ.

ಸಂಪಿಗೆ ಮರಗಳು :

ಇಲ್ಲಿ ವರ್ಷದ 365ದಿನಗಳಲ್ಲೂ ಹೂವು ಬಿಡುವ ಎರಡು ಸಂಪಿಗೆ ಮರಗಳಿದ್ದು ಇವು 400 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಜೀರ್ಣೋದ್ಧಾರ ಕಾಲದಲ್ಲೂ ಈ ಮರಗಳನ್ನು ಕಡಿಯಲು ಬೈದೇರುಗಳು ಒಪ್ಪಿಗೆ ನೀಡಿಲ್ಲ.

ಕಕ್ಕುಂಜೆ ಗರೋಡಿಗೆ ಕಾರಣ

ಒಮ್ಮೆ ಪಕ್ಕಿಬೆಟ್ಟು ಗರೋಡಿ ಪುನರ್ನಿರ್ಮಾಣ ಆಗುತ್ತಿರುವಾಗ ಗೋಡೆ ಕಟ್ಟುವ ವಿಚಾರದಲ್ಲಿ ಕಕ್ಕುಂಜೆಯ ಗುರಿಕಾರರುಗಳಿಗೆ ಅಸಮಾಧಾನವಾಗಿ, ಅವರು ತಮ್ಮದೇ ಒಂದು ಕೂಡುಕಟ್ಟನ್ನು ಕಟ್ಟಿಕೊಂಡು ಗರೋಡಿ ನಿರ್ಮಿಸುವ ಬಗ್ಗೆ ತೀರ್ಮಾನಿಸುತ್ತಾರೆ. ಅದರಂತೆ ಕಕ್ಕುಂಜೆಯಲ್ಲಿ ಹೊಸ ಗರೋಡಿ ನಿರ್ಮಾಣವಾಯಿತು.

ಸಂಕು ಬಾಲೆಗೆ ಪ್ರಸಾದ

1927ರಲ್ಲಿ ಗರೋಡಿ ಜೀರ್ಣೋದ್ಧಾರಗೊಳ್ಳುತ್ತಿದ್ದ ಕಾಲ. ಸಂಕು ಎಂಬ ಮಹಿಳೆ ದೋಣಿಯಲ್ಲಿ ಬರುತ್ತಿರಬೇಕಾದರೆ ಗರೋಡಿ ಬಳಿಯಲ್ಲಿ ಹೊಳೆಯಲ್ಲಿ ದೋಣಿ ಸುರುಳಿ ಸುತ್ತ ತೊಡಗಿದಾಗ ಅವರು ಗರೋಡಿಗೆ ಗುಂಡ ಕಟ್ಟಿಸಿಕೊಡುವುದಾಗಿ ಹರಕೆ ಹೇಳುತ್ತಾರೆ. ಸುರಕ್ಷಿತರಾಗಿ ದಡ ಸೇರುತ್ತಾರೆ. ಸಂಕು ಅವರು ಗುಂಡ ಕಟ್ಟಿಸಿದ್ದು ಗರೋಡಿಯಲ್ಲಿ ಇದೀಗಲೂ ಅವರ ಮನೆತನಕ್ಕೆ ಸಂಕುಬಾಲೆ ಅಂತ ಕರೆದು ಗೌರವಿಸುವ, ಪ್ರಸಾದ ನೀಡುವ ಪದ್ಧತಿಯಿದೆ.
2024-25 ರಲ್ಲಿ ಗರೋಡಿಯು ಜೇರ್ಣೋದ್ಧಾರಗೊಂಡು ಶಿಲಾಮಯ ಗರೋಡಿಯಾಗಿ ಮೂಡಿಬರಲಿದೆ.

ಪೂ ಪೂಜನೆಯವರ ವಿಳಾಸ :

ಮೋಹನ್ ಪೂಜಾರಿ
ಪಕ್ಕಿಬೆಟ್ಟು ಗರೋಡಿಮನೆ,
ಅಂಚೆ ಕಲ್ಯಾಣಪುರ,
ಫೋನ್ ನಂಬರ್ – 99453 61812

ಮಾಹಿತಿ ಸಂಗ್ರಹಿಸಿದ ದಿನಾಂಕ:

09-07-2022

Shree Brahma Baidarkala Garodi, Paddam

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಪಡುಭಾಗ ಪಡ್ಡಾಂ

ಉಡುಪಿಯಿಂದ ಪರ್ಕಳ, ಆತ್ರಾಡಿ ಮಾರ್ಗವಾಗಿ ಓಂತಿಬೆಟ್ಟುವಿನಿಂದ ಮುಂದೆ 1.5 ಕಿ.ಮೀ.ದೂರದಲ್ಲಿ ಬಲಕ್ಕೆ ಪಡ್ಡಾಂ ರಸ್ತೆಗೆ ತಿರುಗಿ ಮತ್ತೆ 1.5 ಕಿ.ಮೀ. ದೂರದಲ್ಲಿ ಎಡಭಾಗದಲ್ಲಿರುವ ಸ್ವಾಗತ ಗೋಪುರದ ಮೂಲಕ ಸಾಗಿ ಪಡ್ಡಾಂ ಗರೋಡಿ ತಲುಪಬಹುದು.
ಪಡ್ಡಾಂನಲ್ಲಿ ಗರೋಡಿ ಸ್ಥಾಪನೆಗೆ ಮೊದಲು ಪಡ್ಡಾಂ ಬೀಡಿನ ಮನಡಯವರು ಹಾಗೂ ಗರಡಿ ಮನೆಯ ಹಿರಿಯ ಬಾಬು ಪೂಜಾರಿ ಹತ್ತಿರದ ಗರೊಡಿಗೆ ನೇಮೋತ್ಸವಕ್ಕೆ ಹೋದಾಗ ಪಡ್ಡಾಂ ಬೀಡಿನ ಮನೆಯವರಿಗೆ ಅಗೌರವವಾದ ಸಂದರ್ಭದಲ್ಲಿ ಪಡ್ಡಾಂ ಪಡುಭಾಗ ಗರಡಿ ಸ್ಥಾಪನೆಯಾಯಿತು.
ಇದೊಂದು ಪುರಾತನ ಆಯದ ಗರೋಡಿಯಾಗಿದ್ದು, ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ದ್ವಾರವು ಬಡಗು ದಿಕ್ಕಿಗೆ ಇದೆ. ಗರಡಿಯು ಇತ್ತೀಚೆಗೆ 23-03-2003ರಲ್ಲಿ ಜೀರ್ಣೋದ್ದಾರವಾಗಿ, ಷಢಾದಾರ ಪ್ರತಿಷ್ಠೆಯೂ ನಡೆದಿದೆ. ಇದಕ್ಕೆ ಮೊದಲು 1975 ರಲ್ಲಿ ಗರಡಿಯ ಜೀರ್ಣೋದ್ದಾರವಾಗಿದೆ.
ಬ್ರಹ್ಮರ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ಕುದುರೆಯ ಮೇಲೆ ಕುಳಿತ ನಾಗ ಬ್ರಹ್ಮರ ಪಂಚಲೋಹದ ಮೂರ್ತಿಯಿದೆ. ಬ್ರಹ್ಮಗುಂಡದ ಮದ್ಯದ ಅಂತಸ್ತಿನಲ್ಲಿ ಕೀಲು ದೇವರು ಹಾಗೂ ಮೇಲಿನ ಅಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಪಾಪೆಇದೆ.
ಬ್ರಹ್ಮಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಹಾಗೂ ಇಬ್ಬರು ಮಕ್ಕಳ ಮರದ ಪಾಪೆಇದೆ.
ಬ್ರಹ್ಮಗುಡಿಯ ಹೊರಭಾಗದಲ್ಲಿ ಜೋಗಿ ಪುರುಷ, ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ. ಮಣೆ ಮಂಚದಲ್ಲಿ ಜುಮಾದಿ ಬಂಟ, ಹುಲಿಚಾಮುಂಡಿ, ಮಲೆಜುಮಾದಿ ಬಂಟ, ಆಚಾರಿಭೂತ. ಬ್ರಾಂದಿ ಮಂಚಗಳಿವೆ.
ಗರಡಿಯ ಆವರಣದೊಳಗೆ ತುಳಸೀಕಟ್ಟೆ, ಅಯ್ಯ ಕಲ್ಲುಗಳಿವೆ. ಇದಲ್ಲದೆ ಗರಡಿಯ ದ್ವಾರದ ಬಳಿ ಗಡುಕಲ್ಲೊಂದು ಇದೆ. ಕಾಲಾವದಿ ಕೋಲದ ಮೂರು ದಿನ ಈ ಗಡುಕಲ್ಲಿಗೆ ಮೇಲೆ ಕೆತ್ತಿದ ಹಣತೆಯಲ್ಲಿ ಎಣ್ಣೆ ಹಾಕಿ ದೀಪ ಉರಿಸುವ ಸಂಪ್ರದಾಯವಿದೆ.

ದಿನೇಶ್ ಪೂಜಾರಿ

ಪಡುಭಾಗ ಗರೋಡಿ ಮನೆಯ ವಸಂತ ಪೂಜಾರಿಯವರು (ಪ್ರಾಯ 50 ವರ್ಷ) ಪೂ ಪೂಜನೆ ಸೇವೆ ಮಾಡುತ್ತಿದ್ದು, ನಿತ್ಯಾನಂದ ಶೆಟ್ಟಿ ಇವರು ಗಾಳಿ ದೇವರ ಮುಕ್ಕಾಲ್ದಿಯಾಗಿ ಸೇವೆ ಮಾಡುತ್ತಿರುವರು. ವಸಂತ ಪೂಜಾರಿಯವರ ಮೊದಲು, ಶ್ರೀಧರ ಪೂಜಾರಿ, ಮಹಾಬಲ ಪೂಜಾರಿ ಹಾಗೂ ಗುಲ್ಲ ಪೂಜಾರಿ ಇವರುಗಳು ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಗರಡಿ ಮನೆಯ ರವಿ ಪೂಜಾರಿ(72 ವರ್ಷ ಪ್ರಾಯ), ವಿಜಯ ಪೂಜಾರಿ ಹಾಗೂ ರಮೇಶ್ ಪೂಜಾರಿ ಇವರುಗಳು ಬೈದೇರುಗಳ ದರ್ಶನದ ಸ್ಥಳ ಪಾತ್ರಿಗಳು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಮಣ ಪೂಜೆ(ಸೂಡ), ಚೌತಿ ಪೂಜೆ, ದೀಪಾವಳಿ ಪೂಜೆ (ಪೊಸ ಬಾರ ಅಗೆಲ್), ಹೂವಿನ ಪೂಜೆ, (ವರ್ಷಕ್ಕೆ ಒಂದು ದಿನ ಮಾತ್ರ ಹರಕೆಯದ್ದು ಸೇರಿಸಿ) ಕದಿರು ಕಟ್ಟುವುದು, ಮಕರದ ಹುಣ್ಣಿಮೆಯಂದು ಕಾಲಾವಧಿ ಅಗೆಲು, ನೇಮೋತ್ಸವಗಳು ನಡೆಯುತ್ತವೆ. ಬೈದೇರುಗಳ ನೇಮೋತ್ಸವದ ಜೊತೆಗೆ ಮಾಯಂದಾಲ್, ಜುಮಾದಿ, ಜುಮಾದಿ ಬಂಟ, ಪಿಲ್ಚಂಡಿ, ಮರ್ಲು ಜುಮಾದಿ, ಮರ್ಲುಜುಮಾದಿ ಬಂಟ, ಜೋಗಿ ಪುರುಷರಿಗೂ ಕೋಲ ಸೇವೆ ನಡೆಯುತ್ತದೆ.
ಗರೋಡಿಯ ಕೂಡು ಕಟ್ಟಿಗೆ ಪಡ್ಡಂ(ಪಡುಭಾಗ), ಆತ್ರಾಡಿ, ಹಾಗೂ ಪುತ್ತಿಗೆಯ ಕೆಲವು ಮನೆಗಳು ಸೇರಿವೆ. ಗರೋಡಿಯ ಮೊಕ್ತೇಸರರಾಗಿ ಪಡುಭಾಗ ಬೀಡಿನ ಹರೀಶ್ ಹೆಗ್ಡೆ, ಹಾಗೂ ಗುತ್ತಿನವರಾಗಿ ಬಡಗು ಮನೆ ಶೇಖರ ಶೆಟ್ಟಿ ಇವರು ನಿರ್ವಹಿಸುತ್ತಿದ್ದಾರೆ. ಪಡುಭಾಗ ಗರೋಡಿ ಮನೆಯಲ್ಲಿ ಮೇಲ್ಮನೆ ಮತ್ತು ಕೆಳಮನೆ ಎಂಬ ಎರಡು ಮನೆಗಳಿವೆ.
ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಣಿಕೆಯ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಕಳಸಕಟ್ಟಿ ಶುದ್ಧ ಮಾಡುವ ಕ್ರಮಗಳು ಆಚರಣೆಯಲ್ಲಿದೆ.
ಗರೋಡಿಗೆ ಸ್ಥಿರ ಆದಾಯವಿರುವುದಿಲ್ಲ. ಹರಕೆ ಮತ್ತು ವಂತಿಗೆಯಿಂದ ಗರೋಡಿಯ ನೇಮೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.
ಗರೋಡಿಯ ನೃತ್ಯವಿಶಾರದರಾಗಿ ಬೊಗ್ಗು ಮೂಡುಬೆಳ್ಳೆ ಇವರು ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಹಿರಿಯರಾದ ಮೆಣ್ಕ ಪರವ, ಪಿಜಿನ ಪರವ, ಬಂಟು ಪರವ, ನರಂಗ ಪರವ ಇವರು ಸೇವೆ ಸಲ್ಲಿಸಿರುತ್ತಾರೆ. ಮಡಿವಾಳರಾಗಿ ಶಿವಾನಂದ ಮಡಿವಾಳ ಪಡುಭಾಗ ಇವರು ವಾದ್ಯಕ್ಕೆ ಸದಾನಂದ ಹಿರಿಯಡ್ಕ ಇವರು ಸೇವೆ ಮಾಡುತ್ತಾರೆ.
ಗರೋಡಿಗೆ ಸಂಬಂಧಪಟ್ಟು ಕೋಟಿಚೆನ್ನಯ ಪ್ರೆಂಡ್ಸ, ಪಡುಭಾಗ ಎಂಬ ಯುವಕರ ಕೂಟವೊಂದು ಗರೋಡಿಯ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತಿದೆ. ಗಣೇಶ ಪೂಜಾರಿ ಇದರ ಅಧ್ಯಕ್ಷರಾಗಿರುತ್ತಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪಡುಭಾಗ ಪಡ್ಡಾಂ,
ಗ್ರಾಮ ಬೊಮ್ಮರಬೆಟ್ಟು,
ಹಿರಿಯಡೆÆಬೈಅಂಚೆ,
ಉಡುಪಿ ತಾಲೂಕು – 576113.

ಗರೋಡಿ ಪೂ ಪೂಜನೆಯವರ ಹೆಸರು ವಿಳಾಸ:

ವಸಂತ ಪೂಜಾರಿ,
ಪಡುಭಾಗ ಗರಡಿಮನೆ,
ಗ್ರಾಮ ಬೊಮ್ಮರಬೆಟ್ಟು,
ಹಿರಿಯಡ್ಕ ಅಂಚೆ,
ಉಡುಪಿ ತಲೂಕು 576113.
ಮೊಬೈಲ್: 9880205676.

ದರ್ಶನ ಸ್ಥಳ ಪಾತ್ರಿಗಳು:

1) ರವಿ ಪೂಜಾರಿ, ಪಡುಭಾಗ ಗರಡಿ ಕೆಳಮನೆ,
ಮೊಬೈಲ್: 9902179956.
2) ವಿಜಯ ಪೂಜಾರಿ, ಪಡುಭಾಗ ಗರೋಡಿಮನೆ,
ಮೊಬೈಲ್:9739510897.
3) ರಮೇಶ್ ಪೂಜಾರಿ, ಪಡುಭಾಗ ಗರಡಿ ಕೆಳಮನೆ ,
ಮೊಬೈಲ್: 9901190480

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2022

Shree Brahma Baidarkala Garodi, Muggeri

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಮುಗ್ಗೇರಿ

ಉಡುಪಿಯಿಂದ NH 66 ಮೂಲಕ ಕಲ್ಯಾಣಪುರ ಕೆ.ಜಿ.ರೋಡ್ ಮೂಲಕ ಸಾಗಿ ಕೊಳಲಗಿರಿ, ಹಾವಂಜೆಯ ನಂತರ ಗೋಳಿಕಟ್ಟೆಯಲ್ಲಿ ಬಲಕ್ಕೆ ತಿರುಗಿದಾಗ ಗರಡಿಯ ಸ್ವಾಗತ ಗೋಪುರ ಕಾಣಸಿಗುವುದು. ಅಲ್ಲಿಂದ ಸುಮಾರು 1. ಕಿ.ಮೀ.ಒಳಗೆ ಸಾಗಿದಾಗ ಮುಗ್ಗೇರಿ ಗರೋಡಿ ಸಿಗುವುದು.
ಇದು ಆಯದ ಗರೋಡಿ. ಗರೋಡಿಯ ಮುಖ್ಯದ್ವಾರ ಪೂರ್ವಾಭಿಮುಖವಾಗಿದ್ದು ಪಡುವಣ ದಿಕ್ಕಿಗೆ ಇನ್ನೊಂದು ದ್ವಾರವಿದೆ.
ಬ್ರಹ್ಮ ಗುಡಿಯಲ್ಲಿ ಬ್ರಹ್ಮರ ಗುಂಡದ ಒಳಗೆ ಪಂಚಲೋಹಕ್ಕೆ ಬೆಳ್ಳಿ ಹೊದಿಸಿದ ಅಶ್ವಾರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಿನ ಅಂತಸ್ಥಿನಲ್ಲಿ ಗಾಳಿ ದೇವರಿಗೆ ಬೆಳ್ಳಿಯ ಪೀಠ, ಪೀಠದ ಮೇಲೆ ಕೂಚಿಯಲ್ಲಿ ನೀರಿಟ್ಟು ಆರಾಧನೆ ಸಲ್ಲುತ್ತದೆ. ಗುಂಡದ ಎಡಭಾಗದಲ್ಲಿ ಮಣೆಮಂಚದಲ್ಲಿ ಕೋಟಿಚೆನ್ನಯರ ಹಾಗೂ ಕುಜುಂಬ ಕಾಂಜವರಿಗೆ ಮಣೆ ಮಂಚದ ಮೇಲೆ ಮೂರು ಸುರಿಯ ಎರಡು ಬಿಲ್ಲುಗಳನ್ನು ಇಟ್ಟು ಆರಾಧನೆ ಇದೆ. ಮಣೆ ಮಂಚದ ಕೆಳಗೆ ಇಬ್ಬರು ಮಕ್ಕಳ ಪ್ರತೀಕವಾಗಿ ಮರದ ಪೀಠದ ಮೇಲೆ ಎರಡು ಗಿಂಡೆಗಳನ್ನು ಇಡಲಾಗಿದೆ.
ಗುಂಡದ ಬಲಭಾಗದಲ್ಲಿ ಮಣೆ ಮಂಚದಲ್ಲಿ ಒಕ್ಕು ಬಲ್ಲಾಳರಿಗೆ ಪೂಜೆ ಸಲ್ಲುತ್ತದೆ.
ಬ್ರಹ್ಮ ಗುಡಿಯ ಹೊರಗೆ ಬೇರೆ ಬೇರೆ ಮಣೆ ಮಂಚಗಳಲ್ಲಿ ಜುಮಾದಿಯ ಬೆಳ್ಳಿಯ ಬಂಗಾರದ ನಾಲಗೆಯ ಮುಖ, ಪಂಜುರ್ಲಿಯ ಬೆಳ್ಳಿಯ ಮುಖ, ಮಾಯಂದಾಲ್ ಬೆಳ್ಳಿಯ ಕೊಡೆ, ಬೆತ್ತ, ಕುಲತ ಜುಮಾದಿಗೆ ಗಿಂಡೆ, ಜೋಗಿಪುರುಷರಿಗೆ ಗಿಂಡೆಯನ್ನು ಹಾಗೂ ನವಿಲುಗರಿಯ ಗುಚ್ಚವನ್ನಿಟ್ಟು ಆರಾಧನೆಯೂ ಇದೆ. ಒಳಗೆ ಗುರು ಕಂಬದ ಆರಾಧನೆಯೂ ಇದೆ.
ಗರೋಡಿಯ ಆವರಣದೊಳಗೆ ಗುಡಿಯಲ್ಲಿ ಮಣೆ ಮಂಚದಲ್ಲಿ ಗಿಂಡೆಯನ್ನಿಟ್ಟು ಪಿಲ್ಚಂಡಿಗೆ ಪೂಜೆ ನಡೆಯುತ್ತದೆ. ಅಯ್ಯಕಲ್ಲು ಹಾಗೂ ತುಳಸಿಕಟ್ಟೆಗಳೂ ಇವೆ.
ಗರೋಡಿಗೆ ತೆಂಕು ಬದಿಯಲ್ಲಿ ಸುಮಾರು 150 ಮೀಟರ್ ದೂರದಲ್ಲಿ ನಾಗಬನ, ಬ್ರಹ್ಮರಗುಡಿ, ನಂದಿಗೋಣ, ಕ್ಷೇತ್ರಪಾಲ, ಬ್ರಹ್ಮ ಸಾನದ ಆವರಣದ ಹೊರಗೆ ಬೊಬ್ಬರ್ಯ ಗುಂಡವೂ ಇದೆ.
ಹಾವಂಜೆ, ಬೆಳ್ಳಂಪಳ್ಳಿ ಹಾಗೂ ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ, ಬಜೆ, ಮಡಿ, ಕಂಬಳಿಬೆಟ್ಟು, ಕೀಳಿಂಜೆ, ಪರಾರಿ, ಪುಂಚೂರು, ಕೀರ್ತಿಬೈಲು, ಇರ್ಮಡಿ, ಮೊದಲಾದ ಊರುಗಳು ಕೂಡುಕಟ್ಟಿಗೆ ಸೇರಿವೆ. ಗರೋಡಿಯಲ್ಲಿ ಮಂಗಳವಾರ ಮತ್ತು ಆದಿಯವಾರ ಪೂಜೆ, ಸಂಕ್ರಾಂತಿ ಪೂಜೆ(ಪೆರ್ಡೂರು) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಕೊಡಿ ತಿಂಗಳಲ್ಲಿ ಅಂದರೆ ಡಿಸೆಂಬರ್ 5 ಹಾಗೂ 6ನೇ ತಾರೀಕಿನಂದು ಹಾಲುಹಬ್ಬ(ಅಗೆಲ್) ಸೇವೆ ನಡೆಯುತ್ತದೆ. ಸುಗ್ಗಿ ತಿಂಗಳ ಏಪ್ರಿಲ್ 1, 2, 3ನೇ ತಾರೀಖಿನಂದು ಅಗೆಲ್, ನೇಮ, ಶುದ್ದದ ಅಗೆಲ್, ಹಾಗೂ ಇತರ ದೈವಗಳಾದ ಜುಮಾದಿ, ಪಂಜುರ್ಲಿ, ಮಾಯಂದಾಲ್, ಹಾಗೂ ಜೋಗಿಪುರುಷರ ಕೋಲ ಸೇವೆಯೂ ನಡೆಯುತ್ತದೆ. ಗರೋಡಿಯ ಹರಕೆ ರೂಪದಲ್ಲಿ ಕಂಚಿಲ್ ಸೇವೆ, ನೀರುಸ್ನಾನ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಸೇವೆಗಳಾಗಿ ನಡೆಯುತ್ತವೆ.
ಗರೋಡಿಗೆ ಸ್ಥಿರ ಆದಾಯ ಇಲ್ಲದ ಕಾರಣ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವಂತಿಗೆ, ಸಹಾಯಧನಗಳಿಂದಲೇ ಭರಿಸುತ್ತಾರೆ. ಇತ್ತೀಚೆಗೆ 26-03-2024ರಂದು ಗರೋಡಿಯು ಜೀರ್ಣೋದ್ದಾರಗೊಂಡಿದೆ.

ಭೋಜು ಪೂಜಾರಿ

ಮುಗ್ಗೇರಿ ಗರಡಿಮನೆ ಭೋಜು ಪೂಜಾರಿ (65 ವರ್ಷ ಪ್ರಾಯ) ಇವರು ಗರೋಡಿಯ ಪೂ ಪೂಜನೆಯವರಾಗಿದ್ದಾರೆ. ಇವರಿಗೆ ಮೊದಲು ಕಾಡ್ಯ ಪೂಜಾರಿ, ತುಕ್ರ ಪೂಜಾರಿ, ಮೊದಲಾದ ಹಿರಿಯರು ಪೂ ಪೂಜನೆಯವರಾಗಿದ್ದರು.
ಪಡುಮನೆ ಸುಧಾಕರ ಶೆಟ್ಟಿ ಇವರು ಗರೋಡಿಯ ಆಡಳಿತ ಮೊಕ್ತೇಸರರಾಗಿದ್ದಾರೆ.
ಸದ್ಯ ಈ ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಭೋಜು ಪೂಜಾರಿ ಹಾಗೂ ತೊಗ್ಗು ಪೂಜಾರಿಯವರು ಸ್ಥಳ ಪಾತ್ರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ. ಇವರಿಗೂ ಮೊದಲು ಹಿರಿಯರಾದ ಕರಿಯ ಪೂಜಾರಿ, ಕಾಡ್ಯ ಪೂಜಾರಿ, ತುಕ್ರ ಪೂಜಾರಿ, ಕುಯಿಂತ್ರ ಪೂಜಾರಿ, ಚಂದು ಪೂಜಾರಿಯವರು ದರ್ಶನ ಪಾತ್ರಿಗಳಾಗಿದ್ದರು.
ನೃತ್ಯ ವಿಶಾರದರಾಗಿ ನರಸಿಂಹ ಪರವ ಚೇರ್ಕಾಡಿ, ಮಡಿವಾಳರಾಗಿ ಗೋಪಾಲ ಮಡಿವಾಳ, ಗಣೇಶ ಮಡಿವಾಳ, ಹಾಗೂ ರಾಜು ಮಡಿವಾಳ ಮುಗ್ಗೇರಿ ಇವರು ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮುಗ್ಗೇರಿ,
ಗರಡಿಬೆಟ್ಟು,
ಹಾವಂಜೆ ಗ್ರಾಮ ಮತ್ತು ಅಂಚೆ.
ಉಡುಪಿ ತಾಲೂಕು – 576124.

ಪೂ ಪೂಜನೆಯವರ ವಿಳಾಸ:

ಭೋಜು ಪೂಜಾರಿ,
ಮುಗ್ಗೇರಿ ಗರಡಿ ಮನೆ, ಗರಡಿಬೆಟ್ಟು,
ಹಾವಂಜೆ ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು – 576124.
ಮೊಬೈಲ್: 9740738730

ಆಡಳಿತ ಮೊಕ್ತೇಸರರ ವಿಳಾಸ:

ಪಡುಮನೆ ಸುಧಾಕರ ಶೆಟ್ಟಿ,
ಪಡುಮನೆ, ಮುಗ್ಗೇರಿ ಹಾವಂಜೆ ಗ್ರಾಮಮತ್ತು ಅಂಚೆ,
ಉಡುಪಿ ತಾಲೂಕು – 576124

ಮಾಹಿತಿ ಸಂಗ್ರಹಿಸಿದ ದಿನಾಂಕ:

14-11-2022

Shree Brahma Baidarkala & Vyagra chamundi Udyavara Kuthpadi Garodi

ಶ್ರೀ ಬ್ರಹ್ಮಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಉದ್ಯಾವರ ಕುತ್ಪಾಡಿ ಗರೋಡಿ

ಉಡುಪಿ ರಾಷ್ಟ್ರೀಯ ಹೆದ್ದಾರಿಯಿಂದ ಕಿನ್ನಿಮೂಲ್ಕಿ ಬಲಾಯಿಪಾದೆಯಲ್ಲಿ ಪಶ್ಚಿಮಕ್ಕೆ ತಿರುಗಿ 1 ಕಿ.ಮೀ. ಸಾಗಬೇಕು.
ಉದ್ಯಾವರ ಕುತ್ಪಾಡಿಯ ಶ್ರೀ ಬ್ರಹ್ಮಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಗರೋಡಿಯು ಬಹಳ ಪುರಾತನವಾದುದು. ಇದು ಆಯದ ಗರೋಡಿಯಾಗಿದ್ದು 2009 ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಆದಿಉಡುಪಿಯ ಪಾಳೇಗಾರ ಪಲ್ಪಟ್ ನಾಯಕರು ಬೇರೆ ಊರಿಗೆ ಯಾವುದೋ ಒಂದು ಸಾಧನೆಗೆ ಹೊರಟು ಹೋಗುತ್ತಿದ್ದಾಗ ಕಿನ್ನಿಮೂಲ್ಕಿಯ ಬಲಾಯಿಪಾದೆ ಬಳಿ ಕುದುರೆ ಮುಗ್ಗರಿಸಿ ಕುಳಿತಿತು. ಅದು ಏದ್ದೇಳದಿದ್ದಾಗ ಪ್ರಶ್ನಾ ಚಿಂತಕರಲ್ಲಿ ಕೇಳಿದರು. ಇಲ್ಲಿ ಕೋಟಿ ಚೆನ್ನಯರು ಗರೋಡಿ ಕಟ್ಟಲು ಬಯಸಿದ್ದಾರೆ ಎಂಬುದಾಗಿ ತಿಳಿದು ಬಂತು. ತಾನು ಕೈಗೊಂಡ ಕಾರ್ಯದಲ್ಲಿ ಗೆದ್ದು ಬಂದರೆ ಗೋಡೆಗೆ ತುಪ್ಪ ಬಳಸಿ ಗರೋಡಿ ಕಟ್ಟುವುದಾಗಿ ಪಲ್ಪಟ್ ನಾಯಕರು ಪ್ರಾರ್ಥಿಸುತ್ತಾರೆ. ಅವರ ಕುದುರೆ ಎದ್ದು ನಿಲ್ಲುತ್ತದೆ. ಅವರು ಯೋಚಿಸಿದ ಕಾರ್ಯ ನೆರವೇರಿದ ಬಳಿಕ ಗರೋಡಿ ಕಟ್ಟಲು ಜಾಗ ಹುಡುಕುತ್ತಾರೆ. ಗರೋಡಿ ಸ್ಥಳ ಆರಿಸಲು ತೆಂಗಿನಕಾಯಿ/ ಚೆಂಡು ಹಾರಿಸಿದಾಗ ಅದು ಈಗ ಗರೋಡಿ ಇರುವ ಮುಳ್ಳಿನ ಬಲ್ಲೆಯ ಜಾಗದಲ್ಲಿ ಬೀಳುತ್ತದೆ. ಇದೇ ಜಾಗದಲ್ಲಿ ಅಂಬಲಪಾಡಿ ಮಹಾಂಕಾಳಿಯ ವಾಹನ ಹುಲಿಚಾಮುಂಡಿ ಮೊದಲೇ ನೆಲೆಯಾಗಿತ್ತು. ಚಾಮುಂಡಿಯೇ ಬೈದೇರುಗಳನ್ನು ಕರೆಸಿಕೊಂಡರು ಎಂಬ ಕಾರಣಕ್ಕೆ ಇಲ್ಲಿ ಹುಲಿಚಾಮುಂಡಿಗೆ ಮೊದಲ ಗೌರವವನ್ನು ಕೊಡಲಾಗುತ್ತದೆ. ಪಲ್ಪಟ್ ನಾಯಕರು ಇಲ್ಲಿ ಗರೋಡಿ ಕಟ್ಟುವಾಗ ಧಾರಾಳ ತುಪ್ಪವನ್ನು ಬಳಸಿದ್ದಾರೆ. ಇಲ್ಲಿ ಗರೋಡಿ ಜೀರ್ಣೋದ್ಧಾರಗೊಳ್ಳುವಾಗ ಈಗಲೂ ಸಾಂಕೇತಿಕವಾಗಿ ತುಪ್ಪವನ್ನು ಗೋಡೆಗೆ ಸುರಿಯುತ್ತಾರೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಮೇಲೆ ಗಾಳಿ ದೇವರಿಗೆ ಗಿಂಡೆ ಇದೆ. ಕೆಳಗೆ ಬ್ರಹ್ಮರ ಮೂರ್ತಿ, ಗುಂಡದ ಎಡಕ್ಕೆ ಕೋಟಿ ಚೆನ್ನಯರ ಪಾಪೆ ಹಾಗು ಇಬ್ಬರು ಮಕ್ಕಳ ಪಾಪೆ ಇದೆ. ಗುಂಡದ ಬಲಕ್ಕೆ : ಕುಜುಂಬ ಕಾಂಜವ ಮತ್ತು ಮಗು. ಕಿನ್ನಿದಾರು -ಮಂಚ, ಒಕ್ಕು ಬಲ್ಲಾಳ ಮತ್ತು ಮಗು. ದೇಯಿಬೈದೆತಿ-ಉಯ್ಯಾಲೆಗಳಿವೆ.
ಹೊರಗೆ ವಾಲಗ ಚಾವಡಿಯಲ್ಲಿ : ಮೈ ಸಂದಾಯ, ಜಾರಂದಾಯ, ಪಟ್ಕಂತಾಯ, ಪಂಜುರ್ಲಿ, ಬೊಬ್ಬರ್ಯ, ಜೋಗಿ ಪುರುಷ, ಪಂಚಧೂಮಾವತಿ, ವ್ಯಾಘ್ರ ಚಾಮುಂಡಿ, ಗುರುಕಂಬಗಳಿವೆ.
ಗರೋಡಿಯ ಆವರಣದೊಳಗೆ : ವ್ಯಾಘ್ರ ಚಾಮುಂಡಿ, ಮಾಯಂದಾಲ್ ಮತ್ತು ಮಗು. ಕೊಳತ ಜುಮಾದಿ, ಅಜಕಾಯಿ ಕಲ್ಲುಗಳಿವೆ.
ಗರೋಡಿಯ ಹೊರ ಆವರಣದಲ್ಲಿ : ನಾಗ ಸನ್ನಿಧಿ, ನಾಗ ಬ್ರಹ್ಮಸ್ಥಾನ-ಬ್ರಹ್ಮ, ರಕ್ತೇಶ್ವರಿ, ನಂದಿಗೋಣ, ಬೊಬ್ಬರ್ಯ, ಕ್ಷೇತ್ರಪಾಲ, ಬೈಕಾಡ್ತಿ ಪಂಜುರ್ಲಿ ದೈವಗಳ ಸಾನಿದ್ಯವಿದೆ.

ದಯಾನಂದ ಪೂಜಾರಿ

ದಯಾನಂದ ಪೂಜಾರಿ ಕೇಚುಮನೆ ಇವರು 2011 ರಿಂದ ಪೂ ಪೂಜನೆ ಮಾಡುತ್ತಿದ್ದಾರೆ. ಇವರ ಮೊದಲು 1950 ರಿಂದ 2011 ರವರೆಗೆ ಬೋಳ ಪೂಜಾರಿ, 1950 ರ ಮೊದಲು ತೋಮ ಪೂಜಾರಿ ಅರ್ಚಕರಾಗಿದ್ದರು.
ಶ್ರೀ ಕೆ. ಚಂದ್ರಶೆಟ್ಟಿ, ದೊಡ್ಡಮನೆ-ಪಟೇಲರ ಮನೆ, ಕುತ್ಪಾಡಿ ಇವರು ಗರೋಡಿಯ ಮೊಕ್ತೇಸರರಾಗಿದ್ದಾರೆ ಇವರ ಮೊದಲು ಶ್ರೀ ಕೃಷ್ಣ ಎ. ಶೆಟ್ಟಿ, ಶ್ರೀ ಶ್ಯಾಮ ಶೆಟ್ಟಿ, ಶ್ರೀ ತೇಜಪ್ಪ ಮಾಸ್ತರ್ ಇವರುಗಳು ಗರೋಡಿ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಬೈದೇರುಗಳ ದರ್ಶನಕ್ಕೆ ಸ್ಥಳ ಪಾತ್ರಿಗಳು ಈಗ ಇಲ್ಲ. ಹಿಂದೆ ಕುಶಲ ಪೂಜಾರಿ, ಶೀನ ಪೂಜಾರಿ ಹಾಗೂ ಪೂವ ಪೂಜಾರಿಯವರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.
ಇಲ್ಲಿ ಹುಲಿ ಚಾಮುಂಡಿಗೆ ನಿತ್ಯ ದೀಪ ಉರಿಸಲಾಗುತ್ತದೆ. ಗರೋಡಿಯಲ್ಲಿ ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲು ಅನ್ನ ನೈವೇದ್ಯ ಸೇವೆ, ಕಟ್ಟುಕಟ್ಟಲೆ ನೇಮ, ಕಾಲಾವಧಿ ನೇಮೋತ್ಸವ ನಡೆಯುತ್ತದೆ. ಅಷ್ಟಮಿಯಿಂದ ಅರ್ಘ್ಯ ಬಿಡುವುದಿದೆ. ಮರುದಿವಸ ಅನ್ನನೈವೇದ್ಯ ಸೇವೆ, ಪಾಡ್ಯ ದಿನ ವಾಲಗ ಚಾವಡಿಯಲ್ಲಿ ಕಟ್ಟುಕಟ್ಟಲೆ ನೇಮೋತ್ಸವ ಇದೆ.
ಕೊಡಿ ತಿಂಗಳಿನಲ್ಲಿ-ಅಗೆಲು ಅನ್ನ ನೈವೇದ್ಯ ಇದೆ. ಅಂಗಣದಲ್ಲಿ ಕಟ್ಟುಕಟ್ಟಲೆ ನೇಮೋತ್ಸವ, ಜುಮಾದಿ-ಹುಲಿಚಾಮುಂಡಿ ಕೋಲ ಇದೆ. ಮಾರ್ಚ್ ತಿಂಗಳಲ್ಲಿ ಕಾಲಾವಧಿ ಅಗೆಲ್ ಅನ್ನ ನೈವೇದ್ಯ, ನೇಮೋತ್ಸವ ಇದೆ. ದೀಪಾವಳಿ ಹಬ್ಬದಂದು ಕಂಬನೆಟ್ಟು ದೀಪಾರಾಧನೆ ಇದೆ. ಸೋಣ ತಿಂಗಳಿನಲ್ಲಿ ಸೋಣಾರತಿ ಪೂಜೆ ಇದೆ.

ಪಟ್ಟ ಸ್ವೀಕಾರ : ಇಲ್ಲಿ ಹೊಸದಾಗಿ ಆಡಳಿತ ಮೊಕ್ತೇಸರರ ಪಟ್ಟವನ್ನು ಅಲಂಕರಿಸುವವರನ್ನು ಕಾನಂಗಿ ದೇವಸ್ಥಾನದ ಕೆರೆಯಲ್ಲಿ ತೀರ್ಥಸ್ನಾನ ಮಾಡಿಸಿ, ಶೃಂಗರಿಸಿ ಅಂಬಲಪಾಡಿ ದೇವಳದ ಬಲ್ಲಾಳರನ್ನು ಒಡಗೂಡಿಸಿಕೊಂಡು ಮೆರವಣಿಗೆ, ಬಿರುದಾವಳಿಗಳಿಂದ ಗರೋಡಿಗೆ ಕರೆತರಬೇಕು. ಬೈದೇರುಗಳು ದರುಶನದಲ್ಲಿ ಅವರ ಕೈ ಹಿಡಿದು ಅವರಿಗೆಂದೇ ಮೀಸಲಾದ ಪೀಠದಲ್ಲಿ ಕುಳ್ಳಿರಿಸಿ, ಗೌರವಿಸುವ ಕ್ರಮ ಕುತ್ಪಾಡಿ ಗರೋಡಿಯಲ್ಲಿದೆ.

ಗರೋಡಿಯ ಕೂಡುಕಟ್ಟು : ಕುತ್ಪಾಡಿ ಗರೋಡಿ ಕೂಡುಕಟ್ಟಿನಲ್ಲಿ ಸುಮಾರು 250 ಮನೆಗಳಿವೆ. ಉದ್ಯಾವರ ಕುತ್ಪಾಡಿ ಎರಡು ಊರುಗಳು
ಸೇರುತ್ತವೆ.

1974, 1983, 2009 ರಲ್ಲಿ ಗರೋಡಿಯ ಜೀರ್ಣೋದ್ಧಾರ-ಬ್ರಹ್ಮಕಲಶ ನಡೆದಿದೆ.
ಮಾರ್ಚ್ ತಿಂಗಳ ನೇಮೋತ್ಸವಕ್ಕೆ ಜಯ ಪರವ ಮತ್ತು ಸಂಘಡಿಗರು ಉಳಿದ ನೇಮೋತ್ಸವಗಳಿಗೆ, ಕೋಲಕ್ಕೆ ಕಿಟ್ಟ ಪಂಬದ, ಮಹೇಶ್ ಗುಜರನ್ಇವರುಗಳು ಈ ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.

ವಿಳಾಸ :

ಶ್ರೀ ಬ್ರಹ್ಮಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಉದ್ಯಾವರ ಕುತ್ಪಾಡಿ ಗರೋಡಿ,
ಅಂಚೆ ಕುತ್ಪಾಡಿ, ಉಡುಪಿ ತಾಲೂಕು ಮತ್ತು ಜಿಲ್ಲೆ 574118

ಪೂ ಪೂಜನೆ :

ದಯಾನಂದ ಪೂಜಾರಿ ಕೇಚುಮನೆ
ಇವರು 2011 ರಿಂದ ಪೂ ಪೂಜನೆ ಮಾಡುತ್ತಿದ್ದಾರೆ.
ವಿಳಾಸ : ಅಂಚೆ ಕಡೆಕಾರ್, ಉಡುಪಿ, ದೂರವಾಣಿ :9482042334

ಮೊಕ್ತೇಸರರು :

ಶ್ರೀ ಕೆ. ಚಂದ್ರಶೆಟ್ಟಿ,
ದೊಡ್ಡಮನೆ-ಪಟೇಲರ ಮನೆ,
ಕುತ್ಪಾಡಿ ದೂರವಾಣಿ – 9820227293

ಮಾಹಿತಿ ಸಂಗ್ರಹಿಸಿದ ದಿನಾಂಕ:

12-07-2022

Kenja Shree Brahma Baidarkala Garodi

ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರಡಿ

ಉಡುಪಿಯಿಂದ ಎನ್‌ಎಚ್66ರಲ್ಲಿ ಕಾಪು–ಉಚ್ಚಿಲ ಮಾರ್ಗವಾಗಿ, ಉಚ್ಚಿಲ ಮಹಾಲಕ್ಷಿ ದೇವಸ್ಥಾನದ ಹತ್ತಿರ ಎಡಕ್ಕೆ ತಿರುಗಿ ಪಣಿಯೂರು ರಸ್ತೆಯಲ್ಲಿ ಪಣಿಯೂರು, ಇರಂದಾಡಿ ಮೂಲಕ ಸುಮಾರು 8ಕಿ.ಮೀ. ಸಾಗಿದರೆ ಕೇಂಜ ಗರೋಡಿ ಸಿಗುವುದು.
ಈ ಗರೋಡಿಯು ಆಯದ ಗರೋಡಿಯಾಗಿದ್ದು ಮೂರು ಬಾಗಿಲುಗಳಿವೆ. ಮುಖ್ಯದ್ವಾರವು ಪೂರ್ವಾಭಿಮುಖವಾಗಿದ್ದು ಉಳಿದೆರಡು ದ್ವಾರಗಳು ಪಶ್ಚಿಮ ಮತ್ತು ಉತ್ತರ ದಿಕ್ಕಿಗಿದೆ.
ಗರೋಡಿಯ ಬ್ರಹ್ಮ ಗುಡಿಯೊಳಗೆ ಗುಂಡದಲ್ಲಿ ಕುದುರೆಯೇರಿ ಕುಳಿತ ನಾಗ ಬ್ರಹ್ಮರ ಬೆಳ್ಳಿಯ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಮರದ ಪಾಪೆ, ಗುಂಡದ ಬಲಬದಿಯಲ್ಲಿ ಕುದುರೆಯಲ್ಲಿ ಕುಳಿತ ಒಕ್ಕು ಬಲ್ಲಾಳರ ಮರದ ಪಾಪೆ, ಕುಜುಂಬ ಕಾಂಜವರ ಮರದ ಪಾಪೆ ಹಾಗೂ ಮಣೆ ಮಂಚದಲ್ಲಿ ಕೊಡಮಣಿತ್ತಾಯ ದೈವಗಳಿಗೆ ಪೂಜೆ ನಡೆಯುತ್ತದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರು ಮತ್ತು ಇಬ್ಬರು ಮಕ್ಕಳ ಹಾಗೂ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ. ಬ್ರಹ್ಮರ ಗುಡಿಯ ಹೊರಗೆ ಬಲಬದಿಯಲ್ಲಿ ಜೋಗಿಪುರುಷರ ಮರದ ಪಾಪೆ ಇದೆ. ಬ್ರಹ್ಮ ಗುಡಿಯ ಎದುರು ಗುರುಕಂಬದ ಆರಾಧನೆ ಇದೆ.
ಗರೋಡಿಯ ಆವರಣದೊಳಗೆ ಬಲಬದಿಯ ಗುಡಿಯಲ್ಲಿ ಹುಲಿಚಾಮುಂಡಿ ದೈವದ ಮರದ ಪಾಪೆಯಲ್ಲಿ ಆರಾಧನೆ ಇದೆ.
ಎಡಬದಿಯ ಗುಡಿಯಲ್ಲಿ ಮೂಲ ಮೈಸಂದಾಯ, ಜಾರಂದಾಯ, ಬಂಟ, ಮುರ್ಚಂಡಿ, ಜಟ್ಟಿಗ ದೈವಗಳ ಆರಾಧನೆ ಇದೆ.
ಇವಲ್ಲದೆ ಗರೋಡಿಯ ಆವರಣದಲ್ಲಿ ಅಯ್ಯಕಲ್ಲು, ತುಳಸೀಕಟ್ಟೆಗಳೂ, ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.
ಕೇಂಜ ಗರೋಡಿ ಮನೆ ಅಜಿತ್ ಪೂಜಾರಿಯವರು ಪೂ ಪೂಜನೆಯವರಾಗಿದ್ದು ಇವರಿಗೆ ಮೊದಲು ಸುರನಾಥ ಅಮೀನ್ (ಬಾಬಣ್ಣ) ರಾಂಪ ಪೂಜಾರಿ, ಗುಡ್ಡ ಪೂಜಾರಿಯವರಂತ ಹಿರಿಯರು ಪೂ ಪೂಜನೆ ಸೇವೆ ಮಾಡಿದ್ದರು. ಪ್ರಭಾಕರ ಪೂಜಾರಿಯವರು ಬೈದೇರುಗಳ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ.
ಗರೋಡಿಯಲ್ಲಿ ಸಂಕ್ರಾಂತಿ ಪೂಜೆ (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಗಜ್ಜೆಯಿ ಸೇವೆ, ಕಾಲಾವಧಿ ಅಗೆಲು, ಬೈದೇರುಗಳ ನೇಮೋತ್ಸವ, ಮೈಂದ ಪೂಜಾರಿ, ಜೋಗಿ ಪುರುಷರ ನೇಮ, ಮಾಯಂದಾಲ್ ಕೋಲ, ಶುದ್ಧದ ಅಗೆಲು ಸೇವೆ ನಡೆಯುತ್ತದೆ.
ಆಟಿ ತಿಂಗಳ ಅಗೆಲು ಸೇವೆ ನಡೆಯುವ 6 ಗರೋಡಿಳಲ್ಲಿ ಇದೂ ಒಂದು. ಸೋಣದ ಅಗೆಲು ಸೇವೆಯೂ ಈ ಗರೋಡಿಯಲ್ಲಿ ನಡೆಯುತ್ತದೆ.
ಕೇಂಜ ಕುತ್ಯಾರು ಭಾಗದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು, ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ವರಡ ವಂತಿಗೆ, ಸಹಾಯ ಧನಗಳ ಮೂಲಕ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.
2013ರ ಮೇ ತೀಂಗಳ 11, 13, ತಾರೀಖಿನಂದು ಜೀರ್ಣೋದ್ಧಾರಗೊಂಡ ಈ ಗೋಡಿಯು ಹಿಂದೆ 1965ರಲ್ಲಿ ನವೀಕರಣಗೊಂಡಿದೆ.
ಶೇಖರ ಪರವ, ಉಗ್ಗಪ್ಪ ಪರವ ಮತ್ತು ಸಂಘಡಿಗರು ಇಲ್ಲಿಯ ನೃತ್ಯ ವಿಶಾರದರಾಗಿ, ಸುರೇಶ ಮಡಿವಾಳ, ಮೂಲ್ಕಿ ಇವರು ಮಡಿವಾಳರಾಗಿ, ಹುಸೇನ್ ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರೊಡಿ,
ಕೇಂಜ ಕುತ್ಯಾರು, ಕುತ್ಯಾರು ಅಂಚೆ,
ಕಾಪು ತಾಲೂಕು, ಉಡುಪಿ – 574116.

ಪೂಪೂಜನೆಯವರು:

ಅಜಿತ್ ಪೂಜಾರಿ,
ಕೇಂಜ ಗರಡಿ ಮನೆ,
ಕುತ್ಯಾರು ಅಂಚೆ, ಕಾಪು ತಾಲೂಕು,
ಉಡುಪಿ 574116, ಮೊಬೈಲ್

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024

Shree Brahma Baidarkala Garodi, Kurkal

ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕುರ್ಕಾಲು

ಉಡುಪಿಯಿಂದ ಉದ್ಯಾವರ ಬೈಪಾಸಿನ ಹತ್ತಿರ ಎಡಕ್ಕೆ ಬೊಳ್ಜೆಗೆ ಹೋಗುವ ರಸ್ತೆಯಲ್ಲಿ ಸುಮಾರು 1.5 ಕಿ.ಮೀ. ಸಾಗಿದರೆ ಬೊಳ್ಜೆ ಗರೋಡಿ ಸಿಗುತ್ತದೆ. ಸುಮಾರು 350 ವರ್ಷಗಳ ಇತಿಹಾಸವಿರುವ ಉಡುಪಿ ಉದ್ಯಾವರ ಬೊಳ್ಜೆಯ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು 1992-1993ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.
ಕುರ್ಕಾಲಿನ ಶ್ರೀ ಬ್ರಹ್ಮಬೈದರ್ಕಳ ಗರೋಡಿಯು ಆಯದ ಗರೋಡಿಯಾಗಿದ್ದು, ಇಲ್ಲಿ ಷಡಾಧಾರ ಪ್ರತಿಷ್ಠೆಯಾಗಿದೆ.
ಬಹಳ ಪುರಾತನವಾದ ಗರೋಡಿಯಿದು. ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಬಹಳ ಹಿಂದೆ ಕುರ್ಕಾಲಿನ ಗಟ್ಲೆಮನೆಗೆ ಬಂದ ಕೋಟಿ ಚೆನ್ನಯರು ಮನೆಯ ಯಜಮಾನ ಪೂಜಾರಿಯವರಲ್ಲಿ ಈ ಊರಿನಲ್ಲಿ ಗರೋಡಿಯನ್ನು ನಿರ್ಮಿಸಬೇಕೆಂದು ಹೇಳುತ್ತಾರೆ. ಪೂಜಾರಿಯವರು ಅಂದಿನ ಗುತ್ತಿನವರಾದ ಕುರ್ಕಾಲು ಬೂಡು ಮಡಸ್ಥಾನಕ್ಕೆ ಹೋಗಿ ವಿಷಯವನ್ನು ಅರುಹುತ್ತಾರೆ. ಮಡಸ್ಥಾನದ ಯಜಮಾನರು ಇಲ್ಲಿನ ನಾಡಗೋಳಿಯಲ್ಲಿ ಮಂದಿಯನ್ನು ಸೇರಿಸಲು ಹೇಳುತ್ತಾರೆ. ಅಲ್ಲಿ ತೀರ್ಮಾನವಾದಂತೆ ಅಲ್ಲಿಂದ ಎಸೆದ ತೆಂಗಿನಕಾಯಿ ಈಗಿರುವ ಗರೋಡಿ ಜಾಗದಲ್ಲಿದ್ದ ಚೂರಿ ಮುಳ್ಳಿನ ಬಲ್ಲೆಗೆ ಬೀಳುತ್ತದೆ. ಅಲ್ಲಿಂದ ಉರುಳುತ್ತಾ ‘ಬೊಳಿಪಾಲೆ’ ಮರದ ಬುಡಕ್ಕೆ ಬಂದು ನಿಲ್ಲುತ್ತದೆ. ಇದು ಕಾಣಿಯೂರು ಮಠಕ್ಕೆ ಸೇರಿದ ಜಾಗವಾಗಿದ್ದು ಇಲ್ಲಿ ಕೋಟಿ ಚೆನ್ನಯರ ಬಗ್ಗೆ ತಿಳಿದಿದ್ದ ಅಂದಿನ ಸ್ವಾಮೀಜಿಯವರೇ ಬೈ ಹುಲ್ಲಿನ ಮಾಡು ಮಾಡಿ ಗರೋಡಿ ಕಟ್ಟಿಸುತ್ತಾರೆ. ಮುಂದೆ ಮಠದವರ ಉಸ್ತುವಾರಿಯಲ್ಲಿಯೇ ಗರೋಡಿಯಲ್ಲಿ ನೇಮೋತ್ಸವಗಳು ಜರಗುತ್ತಿದ್ದವು. ಗರೋಡಿಯ ಒಳಗೆ ಬ್ರಹ್ಮರ ಗುಂಡದಲ್ಲಿ ಗಾಳಿದೇವರ ಸನ್ನಿಧಿಯಲ್ಲಿ ಕೃಷ್ಣನ ಮೂರ್ತಿ ಇರುವುದು, ಮಠಕ್ಕೂ ಇಲ್ಲಿಗೂ ಇರುವ ಸಂಬಂಧವನ್ನು ಸಾರುತ್ತದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ, ಬ್ರಹ್ಮರ ಕುದುರೆಯೇರಿ ನಿಂತ ಮೂರ್ತಿ. ಮೇಲಿನ ಅಂತಸ್ತಿನಲ್ಲಿ ಗಾಳಿ ದೇವರು ಹಾಗೂ ಶ್ರೀ ಕೃಷ್ಣನ ಮೂರ್ತಿ, ಗುಂಡದ ಎಡಭಾಗದಲ್ಲಿ ಕೋಟಿ ಚೆನ್ನಯರ ಪಾಪೆ, ಇಬ್ಬರು ಮಕ್ಕಳ ಪಾಪೆ, ಜೋಗಿ ಪುರುಷ ಇದೆ. ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗು, ಕುದುರೆ ಮೇಲೆ ಕುಳಿತ ಒಕ್ಕು ಬಲ್ಲಾಳರ ಪಾಪೆ, ಒಬ್ಬ ಹುಡುಗನ ಪಾಪೆ.
ಬ್ರಹ್ಮಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಗುರುಕಂಬ, ಆಳೆತ್ತರದ ಸವಾರಿ ಕುದುರೆ, ಸಾವಿರದ ಒಂದು ದೈವಗಳ ಎಂಟು ಮಂಚ, ಪಂಜುರ್ಲಿ ಮಂಚ ಇದೆ.
ಗರೋಡಿಯ ಆವರಣದ ಗುಡಿಯಲ್ಲಿ – ನಂದಿಗೋಣ, ಕೊಳತ ಜುಮಾದಿ, ಮಾಯಂದಾಳ್ ಮತ್ತು ಮಗು, ಹುಲಿ ಚಾಮುಂಡಿ, ಅಜಕಾಯಿ ಕಲ್ಲು ಹಾಗು ಆವರಣದ ಹೊರಭಾಗದಲ್ಲಿ ಬೊಬ್ಬರ್ಯ ಸನ್ನಿಧಿ ಇದೆ.
ಕುರ್ಕಾಲು ಗರೋಡಿ ಮನೆ ವಸಂತ ಪೂಜಾರಿಯವರು ಪೂಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ದೇಜು ಪೂಜಾರಿ (ವಸಂತ ಪೂಜಾರಿಯವರ ಮಾವ), ಬೂದ ಪೂಜಾರಿ (ದೇಜು ಪೂಜಾರಿಯವರ ಮಾವ) ಈ ಸೇವೆ ಮಾಡುತಿದ್ದರು.

ರವಿ ಪೂಜಾರಿ

ಇಸವಿ 2000 ದಿಂದ ರವಿ ಪೂಜಾರಿಯವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಯಾಗಿ ಸೇವೆಮಾಡುತಿದ್ದಾರೆ. ಇವರ ಮೊದಲು ಸೋಮಯ್ಯ ಪೂಜಾರಿ, ಮುತ್ತ ಪೂಜಾರಿ, ಕುರ್ಕಾಲು ಮಣ್ಣಗುರಿ ಕೋಟಿ ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು.
ಇಲ್ಲಿ ಗರೋಡಿಯ ನಿರ್ವಹಣೆಯನ್ನು ಗರೋಡಿ ಮನೆಯ ಯಜಮಾನರೇ ಮಾಡುತ್ತಾರೆ. ಗರೋಡಿ ಕೂಡುಕಟ್ಟಿನ ಗುರಿಕಾರರುಗಳು ಸಹಕರಿಸುತ್ತಾರೆ. ದೇಣಿಗೆ ರೂಪದಲ್ಲಿ ಊರಿನಲ್ಲಿ ಗರೋಡಿಗೆ ನೆರವು ಬರುತ್ತದೆ.
ಗರೋಡಿಯಲ್ಲಿ ನಿತ್ಯ ದೀಪ ಉರಿಸಲಾಗುವುದು. ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲ್ ಅನ್ನ ಸೈವೇದ್ಯ ಸೇವೆ, ಕಾಲಾವಧಿ ನೇಮೋತ್ಸವ, ಮಾಯಂದಾಳ್ ನೇಮ, ಕಟ್ಟು ಕಟ್ಟಲೆ ಹುಲಿ ಚಾಮುಂಡಿ ಕೋಲ ನಡೆಯುತ್ತದೆ. ಹರಕೆ ಅಗೆಲ್ ಅನ್ನ ನೈವೇದ್ಯ, ನೇಮೋತ್ಸವ ಇದೆ. ಅಷ್ಟಮಿಯಂದು ಪೂಜೆ, ಅರ್ಘ್ಯ ಬಿಡುವುದಿದೆ. ದೀಪಾವಳಿಗೆ-ದೀಪಕಂಬ ನೆಟ್ಟು ಬಲಿಯೇಂದ್ರನನ್ನು ಕರೆಯುವುದಿದೆ. ಸೋಣ ತಿಂಗಳಿನಲ್ಲಿ ಅಗೆಲ್ ಅನ್ನ ನೈವೇದ್ಯ ಇದೆ. (ಪ್ರತ್ಯೇಕ). ಪಗ್ಗು ತಿಂಗಳಲ್ಲಿ 18 ಹೋಗುವ ದಿನ ಬೀಡಿನ ಮನೆಯವರ ಲೆಕ್ಕದಲ್ಲಿ ಗಜ್ಜೆಯಿ ಅಗೆಲ್ ಸೇವೆ ನಡೆಯುತ್ತದೆ.
ಕುರ್ಕಾಲು, ಕುಲೇದು, ಮಣಿಪುರ, ದೆಂದೂರು, ಪಾಜೈ, ಬಿಳಿಯೂರು, ನೂಜಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ.
ಗುರಿಕಾರರುಗಳು :
ಗಟ್ಲೆಮನೆ – ಶೀನ ಪೂಜಾರಿ (9901912547)
ಮಣಿಪುರ – ದಿಲೀಪ್ ಪೂಜಾರಿ,
ದೆಂದೂರು – ಗೋಪುಪೂಜಾರಿ,
ಪಾಜೈ – ಕೃಷ್ಣಪ್ಪ ಪೂಜಾರಿ,
ನೂಜಿ – ಕುಟ್ಟಿ ಪೂಜಾರಿ,
ಕುರ್ಕಾಲು – ರಾಜು ಪೂಜಾರಿ,
ಕುರ್ಕಾಲು – ಚೋಂಗು ಪೂಜಾರಿ,
ಕುರ್ಕಾಲು – ರಾಘು ಪೂಜಾರಿ,
ದೆಂದೂರು – ಕೊರಗ ಪೂಜಾರಿ,
ಕುರ್ಕಾಲು – ಉಮೇಶ್ ಪೂಜಾರಿ
ಬಿಳಿಯಾರು – ನೇಮಕವಾಗಿಲ್ಲ
ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡು ಕಾಯಿ ಕಾಣಿಕೆ ತೆಗೆದಿಡುವುದು, ಹೆರಿಗೆ ನಂತರದ ತಿಂಗೊಳ್ ಮಾಡಿಸುವ ಕ್ರಮ, ಅಶುದ್ಧ ನಿಮಿತ್ತ ಶುದ್ಧ ಮಾಡುವ ಕ್ರಮಗಳಿವೆ.
ಜೀರ್ಣೋದ್ಧಾರ ವಿವರ :
11-05-1932 ರಲ್ಲಿ ಜೀರ್ಣೋದ್ಧಾರ
11-12-1990 ರಲ್ಲಿ ಬ್ರಹ್ಮಕುಂಬಾಭಿಷೇಕ
28-04-2005 ರಲ್ಲಿ ಬ್ರಹ್ಮಕಲಶ ಜೀರ್ಣೋದ್ಧಾರ
ಚಲ್ಲಪರವ, ಸಂತೋಷ ಪರವ, ಅಪ್ಪು ಪರವ, ನರಸಿಂಹ ಪರವ ಇವರು ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ. ಹಿಂದೆ ನರಂಗ ಪರವ, ಚಲ್ಲ ಪರವ, ದೇವು ಪರವ ಇವರು ಈ ಸೇವೆ ಮಾಡಿದ್ದರು.

ಗರೋಡಿಯ ವಿಳಾಸ :

ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಕುರ್ಕಾಲು, ಅಂಚೆ-ಸುಭಾಸ್ನಗರ
ವಯಾ ಕಟಪಾಡಿ, ಕಾಪು ತಾಲೂಕು,
ಉಡುಪಿ ಜಿಲ್ಲೆ – 574 105

ಸ್ಥಳ ಪಾತ್ರಿಯ ವಿಳಾಸ :

ರವಿ ಪೂಜಾರಿ
“ಶ್ರೀ ಮುತ್ತು” ಕುರ್ಕಾಲು ಗ್ರಾಮ,
ಸುಭಾಸ್‌ನಗರ,
ಕಾಪು ತಾಲೂಕು, ಉಡುಪಿ ಜಿಲ್ಲೆ, ದೂರವಾಣಿ : 9845178797

ಮಾಹಿತಿ ಸಂಗ್ರಹಿಸಿದ ದಿನಾಂಕ:

13-07-2022

Shree Kodamanittaya & Shree Brahma Baidarkala Garodi, Kudigrama

ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕುದಿಗ್ರಾಮ

ಉಡುಪಿಯಿಂದ ಮಣಿಪಾಲ – ಹಿರಿಯಡಕ – ಬೊಮ್ಮರಬೆಟ್ಟು ಮಾರ್ಗವಾಗಿ ಮುಂದೆ ಸಾಗಿ ಕೊಂಡಾಡಿ ಬಸ್ಟಾಪನಲ್ಲಿ ಬಲಕ್ಕೆ ತಿರುಗಿ ಸುಮಾರು 2.8ಕಿ.ಮೀ. ದೂರ ಸಾಗಿದರೆ ಕುದಿಗ್ರಾಮ ಗರೋಡಿ ಸಿಗುವುದು.
ಇದೊಂದು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಉತ್ತರ ದಿಕ್ಕಿಗೆ ಇನ್ನೊಂದು ದ್ವಾರವಿದೆ
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಡದಲ್ಲಿ ಕುದುರೆಯ ಮೇಲೆ ಕುಳಿತ ಬ್ರಹ್ಮರ ಪಂಚಲೋಹದ ಮೂರ್ತಿ , ಮೆಲಂತಸ್ಥಿನಲ್ಲಿ ಗಾಳಿ ದೇವರಿಗೆ ಕೂಚಿಯಲ್ಲಿ ನೀರು ಹಾಗೂ ದೀಪವನ್ನಿಟ್ಟು ಆರಾಧಿಸುತ್ತಾರೆ. ಬ್ರಹ್ಮ ಗುಡದ ಎಡಭಾಗದಲ್ಲಿ ಮಣೆಮಂಚದಲ್ಲಿ ಕೋಟಿಚೆನ್ನಯರ ಪಂಚಲೋಹದ ಮೂರ್ತಿ ಹಾಗೂ ಬಲಭಾಗದ ಮಣೆಮಂಚದಲ್ಲಿ ಕುಜುಂಬ ಕಾಂಜವರ ಪಂಚಲೋಹಸ ಮೂರ್ತಿ ಇದೆ.
ಬ್ರಹ್ಮಗುಡಿಯ ಹೊರಗೆ ಎಡಭಾಗದಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ, ಮಣೆ ಮಂಚದಲ್ಲಿ ಜುಮಾದಿ ಮತ್ತು ಪರಿವಾರ ದೈವ ಹಾಗೂ ಮರ್ಲು ಭೂತಗಳಿಗೆ ಪೂಜೆ ನಡೆಯುತ್ತದೆ. ಎಡಭಾಗದಲ್ಲಿ ಜೋಗಿ ಪುರುಷರ ಮರದ ಪಾಪೆ ಇದೆ. ಗುರು ಕಂಬದ ಆರಾಧನೆಯೂ ನಡೆಯುತ್ತದೆ.

ಕರುಣಾಕರ ಪೂಜಾರಿ

ಗರಡಿಮನೆ

ಈ ಗರೋಡಿಯಲ್ಲಿ ಗರಡಿಮನೆ ಕರುಣಾಕರ ಪೂಜಾರಿಯವರು (62 ವರ್ಷ ಪ್ರಾಯ) ಪೂ ಪೂಜನೆಯವರಾಗಿದ್ದಾರೆ. ಹಿಂದೆ ಇವರ ಹಿರಿಯರುಗಳಾದ ನಾರಾಯನ ಪೂಜಾರಿ, ಬೈಕ್ಲ ಪೂಜಾರಿ, ಇವರುಗಳು ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿದ್ದರು.
ಸತೀಶ್ ಪೂಜಾರಿಯವರು ಇಲ್ಲಿ ದರ್ಶನದ ಸ್ಥಳ ಪಾತ್ರಿಗಳಾಗಿರುವರು. ಹಿಂದೆ ಕಿಟ್ಟು ಪೂಜಾರಿ, ಕೋತು ಪೂಜಾರಿ, ಪೆಗ್ಗು ಪೂಜಾರಿ, ಮೊದಲಾದ ಹಿರಿಯರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.

ರವಿ ಶೆಟ್ಟಿ

ರವಿ ಶೆಟ್ಟಿ (61 ವರ್ಷ ಪ್ರಾಯ) ಇವರು ಕೊಡಮಣಿತ್ತಾಯ ಮುಕ್ಕಾಲ್ದಿಯಾಗಿರುವರು.
ಪಡುಮನೆ ಎಂ.ಎಸ್. ಆಳ್ವರ ವಂಶಸ್ಥರು ಇಲ್ಲಿಯ ಆಡಳಿತ ಮೊಕ್ತೇಸರರಾಗಿರುವರು.
ಕೋಟಿಚೆನ್ನಯರು ಇಲ್ಲಿಗೆ ಭೇಟಿ ನೀಡಿ ಕೋಟಿ ಸುರಿಯ ಹಾಕಿ ನೀರು ತೆಗೆದ “ ಕೋಟಿತೀರ್ಥ ‘’ ದಲ್ಲಿ ನೀರು ಕುಡಿದು ನಾಗಬನಕ್ಕೆ ಭೇಟಿ ನೀಡಿ ಹತ್ತಿರದಲ್ಲೆ ನೆಲ್ಲಿಯ ಮರದ ಅಡಿಯಲ್ಲಿ ಆಶ್ರಯ ಪಡೆದರು. ಅದರ ಪ್ರತೀಕವಾಗಿಇಲ್ಲಿ ಗರಡಿ ಸ್ಥಾಪನೆಯಾಯಿತು ಎಂಬ ಸ್ಥಳ ಪುರಾಣವಿದೆ. ಇಂದಿಗೂ ಇದೇ ಕೋಟಿ ತೀರ್ಥದಿಂದ ನೀರು ತಂದು ಗರೋಡಿಯಲ್ಲಿ ಪೂಜೆ ನಡೆಯುತ್ತದೆ.

ಕೋಟಿ ತೀರ್ಥದಿಂದ ಗರೋಡಿ ಹಾಗು ಗರೋಡಿಮನೆಯ ದ್ರಶ್ಯ

ಗರೋಡಿಯ ಹೊರಗೆ ಆವರಣದ ಒಳಗೆ ಗುಡಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿಯ ಆರಾಧನೆ ಇದೆ.
ಕೊಡಮಣಿತ್ತಾಯ ದೈವದ ಗುಡಿಯಲ್ಲಿ ಮಣೆಮಂಚದಲ್ಲಿ ಪಂಚಲೋಹದ ಮೂರ್ತಿಯಲ್ಲಿ ಆನೆಯ ಮೇಲೆ ಕುಳಿತ ದರ್ಮರಸು, ಕುದುರೆಯ ಮೇಳೆ ಕುಳಿತ ಕೊಡಮಣಿತ್ತಾಯ, ಗಿಂಡೆಯಲ್ಲಿ ನೀರಿಟ್ಟು ಕುಕ್ಕಿನಂತಾಯ ದೈವಗಳಿಗೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು ಹಾಗೂ ತುಳಸಿಕಟ್ಟೆ, ತೀರ್ಥಭಾವಿಗಳಿವೆ. ಹತ್ತರದಲ್ಲಿಯೇ ಗರೋಡಿಗೆ ಸಂಬಂಧಪಟ್ಟ ಬ್ರಹ್ಮ ಸ್ಥಾನವೂ ಇದೆ.
ಕುದಿ ಗ್ರಾಮ, ವರ್ವಾಡಿ, ಪೆರ್ಣಂಕಿಲ, ಪೆಲತ್ತೂರು, ಕಣಂಜಾರು, ಪಡುಬೆಟ್ಟು, ಕೊಂಡಾಡಿ, ಊರಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದ್ದು, ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮೊದಲಾದ ಸಂದರ್ಭಗಳಲ್ಲಿ ತೆಗೆದಿಟ್ಟ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ, ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಊರು ಸೇರಿ ಕಜ್ಜಾಯ ಸೇವೆ, ಕೊಡಿ ತಿಂಗಳಲ್ಲಿ ಅನ್ನ ನೈವೇದ್ಯದ ಅಗೆಲು, ಸುಗ್ಗಿ ತಿಂಗಳಲ್ಲಿ ಶ್ರೀ ರಾಮನವಮಿಯ ಮೊದಲ ದಿನ ಅಗೆಲು ಸೇವೆ, ನವಮಿಯಂದು ಬೈದೇರುಗಳ ನೇಮ, ಮರುದಿನ ಕೊಡಮಣಿತ್ತಾಯ, ಮಾಯಂದಾಲ್, ಜೋಗಿ ಪರುಷ, ಜುಮಾದಿ, ಹಾಗೂ ಪಿಲ್ಚಂಡಿ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ.
ಊರ ಭಕ್ತರ ವಂತಿಗೆ, ಹರಕೆ ಸಹಾಯಧನಗಳಿಂದ ಈ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಭರಿಸಲಾಗತ್ತದೆ.
ಗರೋಡಿಯು 2004ರಲ್ಲಿ ಜೀರ್ಣೋದ್ದಾರಗೊಂಡಿದ್ದು ಅದಕ್ಕೆ ಮೊದಲು 1928ರಲ್ಲಿ ಜೀರ್ಣೋದ್ಧರವಾಗಿತ್ತು.
ಈ ಗರೋಡಿಗೆ ನೃತ್ಯವಿಶಾರದರಾಗಿ ಬಾಬು ಪರವ ಬೈಲೂರು ಇವರು ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರೋಡಿ,
ಕುದಿಗ್ರಾಮ,
ವಯಾ ಹಿರಿಯಡ್ಕ,
ಹಿರಿಯಡ್ಕ ಅಂಚೆ,
576113, ಉಡುಪಿ ತಾಲೂಕು.

ಪೂಪೂಜನೆಯವರ ವಿಳಾಸ:

ಕರುಣಾಕರ ಬಿ. ಪೂಜಾರಿ,
ಗರೋಡಿ ಮನೆ,
ಕುದಿಗ್ರಾಮ,
ಹಿರಿಯಡ್ಕ ಅಂಚೆ,
ಉಡುಪಿ ತಾಲೂಕು. – 576113
ಮೊಬೈಲ್ ನಂಬ್ರ: 88506 38215

ಕೊಡಮಣಿತ್ತಾಯ ಮುಕ್ಕಾಲ್ದಿ:

ರವಿ ಶೆಟ್ಟಿ,
ಚಿಮಿಣಿ ಬೆಟ್ಟು ಮನೆ,
ವಯಾ ಹಿರಿಯಡ್ಕ,
ಹಿರಿಯಡ್ಕ ಅಂಚೆ,
ಉಡುಪಿ ತಾಲೂಕು. – 576113

ಮಾಹಿತಿ ಸಂಗ್ರಹಿಸಿದ ದಿನಾಂಕ:

16-11-2024

Shree Brahma Baidarkala Garodi, Shirva Maanibettu

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಶಿರ್ವ ಮಾಣಿಬೆಟ್ಟು

ಉಡುಪಿಯಿಂದ ಕಟಪಾಡಿ – ಶಂಕರಪುರ – ಬಂಟಕಲ್ಲು ದಾಟಿ ಕೋಡುಗುಡ್ಡೆಯಲ್ಲಿ ಎಡಕ್ಕೆ ತಿರುಗಿ ಸುಮರು 3ಕಿ.ಮೀ. ಸಾಗಿದ ನಂತರ ಪುನ: ಎಡಕ್ಕೆ ತಿರುಗಿ ಸುಮಾರು 1ಕಿ.ಮೀ. ಒಳಗೆ ಹೋದರೆ ಬಲಬದಿಯಲ್ಲಿ ಗರೋಡಿ ಇರುವುದು.
ಇದೊಂದು ಆಯದ ಗರೋಡಿಯಾಗಿದ್ದು ಪೂರ್ವಕ್ಕೆ ಮುಖ್ಯ ದ್ವಾರವಿದ್ದು ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಗರೋಡಿಯಲ್ಲಿ ಷಡಾಧಾರ ಪ್ರತಿಷ್ಠೆಯಾಗಿದೆ.
ಸ್ಥಳ ಪುರಾಣದಲ್ಲಿ ತಿಳಿಸಿದಂತೆ ಕೋಟಿಚೆನ್ನಯರು ಮೊದಲು ನಡಿಬೆಟ್ಟಿಗೆ ಬಂದು ಅಲ್ಲಿ ನಿಲ್ಲಲು ಸರಿಯಾದ ಸ್ಥಳ ಇಲ್ಲದ ಕಾರಣ ನಡಿಬೆಟ್ಟು ಮನೆಯವರು ಮಾಣಿಬೆಟ್ಟಿನ ಸ್ಥಳವನ್ನು ಬಿಟ್ಟುಕೊಟ್ಟು ಇಲ್ಲಿ ಗರೋಡಿ ಸ್ಥಾಪನೆಯಾಯಿತು.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಬಂಗಾರದ ಮೂರ್ತಿ ಇದೆ. ಮೇಲಂತಸ್ಥಿನಲ್ಲಿ ಗಾಳಿ ದೇವರಿಗೆ ಕೂಚಿಯಲ್ಲಿ ನೀರು ದೀಪ ಇಟ್ಟು ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಪಾಪೆ ಹಾಗೂ ಮಣೆ ಮಂಚಗಳಿವೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಮೈಸಂದಾಯ ಹಾಗೂ ಮಣೆ ಮಂಚದಲ್ಲಿ ಪಿಲ್ಚಂಡಿಯ ಬೆಳ್ಳಿಯ ಮುಖವಾಡಕ್ಕೆ ಆರಾಧನೆ ಇದೆ. ಎಡಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಜಾರಂದಾಯ, ಬಂಟ ದೈವಗಳ ಆರಾಧನೆಯೂ ಇದೆ.
ಗರೋಡಿಯ ಒಳಗೆ ಬಲಭಾಗದಲ್ಲಿ ಗುರುಕಂಬಕ್ಕೆ ಪೂಜೆ ನಡೆಯುತ್ತದೆ.

ಗರೋಡಿಯ ಹೊರಾಂಗಣದಲ್ಲಿ ಕ್ಷೇತ್ರಪಾಲ(ಅಯ್ಯಕಲ್ಲು) ತುಳಸೀಕಟ್ಟೆ, ಹಾಗೂ ದೀಪದ ಕಂಬಗಳಿವೆ.

ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ಬ್ರಹ್ಮ ಸ್ಥಾನದಲ್ಲಿ ಪಂಚದೈವಗಳ ಸಾನಿಧ್ಯವಿದೆ.

ಗರೋಡಿ ಮನೆ

ಗರೋಡಿ ಮನೆಯ ಒಳಗೆ ಗುಡಿಯಲ್ಲಿ ಮಾಯಂದಾಳ್ ಹಾಗೂ ಮಗುವಿನ ಮರದ ಪಾಪಗಳಿಗೆ ಪೂಜೆ ನಡೆಯುತ್ತದೆ.

ಆನಂದ ಪೂಜಾರಿ

ಸತೀಶ್ ಪೂಜಾರಿ

ಗರೋಡಿ ಮನೆ ಆನಂದ ಪೂಜಾರಿಯವರು (62ವರ್ಷ) ಇವರು ಪೂ ಪೂಜನೆಯವರಾಗಿದ್ದು ಸತೀಶ್ ಪೂಜಾರಿ(45ವರ್ಷ) ಇವರು ಎರಡನೇ ಪೂಜಾರಿಯವರಾಗಿದ್ದಾರೆ. ಇವರಿಗೆ ಮೊದಲು ಇವರ ಹಿರಿಯರಾದ ಚೀಂಕ ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು. ಜಯ ಪೂಜಾರಿಯವರು ಇಲ್ಲಿ ಬೈದೇರುಗಳ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ.
ಗರೋಡಿ ಮನೆ ಆನಂದ ಪೂಜಾರಿಯವರು (62ವರ್ಷ) ಇವರು ಪೂ ಪೂಜನೆಯವರಾಗಿದ್ದು ಸತೀಶ್ ಪೂಜಾರಿ(45ವರ್ಷ) ಇವರು ಎರಡನೇ ಪೂಜಾರಿಯವರಾಗಿದ್ದಾರೆ. ಇವರಿಗೆ ಮೊದಲು ಇವರ ಹಿರಿಯರಾದ ಚೀಂಕ ಪೂಜಾರಿಯವರು ಪೂ ಪೂಜನೆ ಸೇವೆ ಮಾಡುತ್ತಿದ್ದರು. ಜಯ ಪೂಜಾರಿಯವರು ಇಲ್ಲಿ ಬೈದೇರುಗಳ ದರ್ಶನದ ಸ್ಥಳ ಪಾತ್ರಿಯಾಗಿದ್ದಾರೆ.
ಶಿರ್ವ, ಮಾಣಿಬೆಟ್ಟು, ಮಟ್ಟಾರ್, ಕೋಡು, ಪಂಜಿಮಾರ್, ಕಟ್ಟಿಂಗೇರಿ, ಎಡ್ನೇರ್, ಬೆಳಿಂಜಾಲೆ, ಸೂಡ ಮಕ್ಕೇರಿ ಬೈಲು ಗ್ರಾಮಗಳ ಜನರು ಈ ಗರೋಡಿಯ ಕೂಡು ಕಟ್ಟಿಗೆ ಸೇರಿದ್ದಾರೆ. ಊರವರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಎಲ್ಲಾ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತದೆ.
ಇತ್ತೀಚೆಗೆ 2023ರಲ್ಲಿ ಗರೋಡಿಯು ಜೀರ್ಣೋದ್ಧಾರಗೊಂಡಿದೆ. ಅದಕ್ಕೆ ಮೊದಲು 2008 ಹಾಗೂ 1970ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಗರೋಡಿಯ ನೃತ್ಯ ವಿಶಾರದರಾಗಿ ಬೊಗ್ಗು ಪರವ ಮೂಡುಬೆಳ್ಳೆ ಮತ್ತು ಸಂಘಟಿಗರು, ಮಡಿವಾಳರಾಗಿ ಸತೀಶ್ ಮಡಿವಾಳ ಸೂಡ, ವಾದ್ಯದವಾಗಿ ಲಕ್ಷಣ ಸೇರಿಗಾರ ಎಲ್ಲೂರು, ಹಾಗೂ ಹನೀಪ್ ಮುದರಂಗಡಿ ಇವರುಗಳು ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮಾಣಿಬೆಟ್ಟು,
ಶಿರ್ವ ಗ್ರಾಮ, ಅಂಚೆ ಮಟ್ಟಾರು,
ಕಾಪು ತಾಲೂಕು,
ಉಡುಪಿ ಜಿಲ್ಲೆ, 574116.

ಪೂಪೂಜನೆಯವರು:

ಸದಾನಂದ ಪೂಜಾರಿ,
ಗರೋಡಿಮನೆ, ಪಡುಬೆಳ್ಳೆ ಅಂಚೆ ಕುಂಜಾರುಗಿರಿ,
ಉಡುಪಿ ತಾಲೂಕು & ಜಿಲ್ಲೆ – 576116
ಮೊಬೈಲ್ : 9071544952.
ಸತೀಶ್ ಪೂಜಾರಿ – 9901635299.

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024

Shree Brahma Baidarkala & Dhoomavati Garodi, Kidiyoor

ಶ್ರೀ ಬ್ರಹ್ಮಬೈರ್ಕಳ ಹಾಗೂ ಧೂಮಾವತಿ ಗರೋಡಿ, ಕಿದಿಯೂರು-ಕಡೆಕಾರು

ಉಡುಪಿಯಿಂದ ಅಂಬಲಪಾಡಿ ಬೈಪಾಸ್ ದಾಟಿ ಅಂಬಲಪಾಡಿ ಕಿದಿಯೂರು ತಲುಪಿ ಕಿದಿಯೂರು ಜಂಕ್ಷನ್ನಿಂದ ಎಡಕ್ಕೆ ತಿರುಗಿ 500ಮೀ. ಸಾಗಿದರೆ ಬಲಕ್ಕೆ, ಕಿದಿಯೂರು ಗರೋಡಿ ರಸ್ತೆಯಲ್ಲಿ ಸುಮಾರು 1ಕಿ.ಮೀ. ಸಾಗಿದರೆ ನೇರ ಕಿದಿಯೂರು ಗರೋಡಿ ತಲುಪ ಬಹುದು. ಈ ಗರೋಡಿಯು ಉದ್ಯಾವರ ಹೊಳೆಯ ರಮಣೀಯ ಸ್ಥಳದಲ್ಲಿದೆ.
ಈ ಗರೋಡಿಯು ಪರಿಪೂರ್ಣ ಆಯದಲ್ಲಿ ಕಟ್ಟಲ್ಪಟ್ಟಿದ್ದು, ಇದು ಆಯದ ಗರಡಿಯೆಂದೇ ಪ್ರಸಿದ್ದಿ. ಷಢಾದಾರ ಪ್ರತಿಷ್ಠೆಯಲ್ಲಿರುವ ಈ ಗರೋಡಿಯ ಮುಖ್ಯದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೊಂದು ದ್ವಾರವು ಪಶ್ಚಿಮ ದಿಕ್ಕಿಗಿದೆ. ಸ್ಥಳ ಪುರಾಣದಲ್ಲಿ ತಿಳಿಸಿದಂತೆ ಹಿಂದೊಮ್ಮೆ ಕೋಟಿಚೆನ್ನಯರು ಗಂಗೆಗೆ ಸಂಧಿ ಹೇಳಿ (ವಡಂಬಡಿಕೆ ಮಾಡಿ ಹೊಳೆಯ ಒಂದು ಪಾರ್ಶವನ್ನು ಮುಟ್ಟಿ ಅಲ್ಲಿ ಗರೋಡಿ ನಿರ್ಮಿಸಲು ಸೂಚಿಸಿದಂತೆ) ಈ ಗರೋಡಿಯ ನೆಲೆಯಾಯಿತು ಎಂಬ ನಂಬಿಕೆ ಇದೆ.
ಬ್ರಹ್ಮರ ಗುಡಿಯಲ್ಲಿ ಬ್ರಹ್ಮ ಗುಂಡದ ಒಳಗೆ ಕುದುರೆಯಲ್ಲಿ ಕುಳಿತ ನಾಗ ಬ್ರಹ್ಮರ ಮುಖಕ್ಕೆ ಬಂಗಾರ ಹೊದಿಸಿದ ಬೆಳ್ಳಿಯ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾದನೆ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ
ಬಲಭಾಗದಲ್ಲಿ ಕುದುರೆಯಲ್ಲಿ ಕುಳಿತ ಒಕ್ಕು ಬಲ್ಲಾಳರ ಪಾಪೆ ಹಾಗೂ ಕುಜುಂಬ ಕಾಂಜವರ ಪಾಪೆ ಇದೆ. ಪಕ್ಕದಲ್ಲಿ ಮರದ ಉಯ್ಯಾಲೆಯೂ ಇದೆ.
ಬ್ರಹ್ಮರ ಗುಡಿಯ ಹೊರಗೆ ಎಡಭಾಗದಲ್ಲಿ ಜೋಗಿ ಪುರುಷರ ಮರದ ಪಾಪೆ, ಮಣೆ ಮಂಚದಲ್ಲಿ ಪಿಲ್ಚಂಡಿಯ ಆರಾಧನೆಯಿದೆ. ಬಲಭಾಗದಲ್ಲಿ ಮಣೆಮಂಚದಲ್ಲಿ ಬೆಳ್ಳಿಯ ಮತ್ತು ಪಂಚಲೋಹದ ಜುಮಾದಿಯ ಮುಖವಿದೆ.(ಎರಡಕ್ಕೂ ಬಂಗಾರದ ನಾಲಗೆ ಇದೆ) ಇನ್ನೊಂದು ಮಣೆಮಂಚದಲ್ಲಿ ಪಂಜುರ್ಲಿಗೆ ಆರಾಧನೆಯಿದೆ.
ಬ್ರಹ್ಮರ ಗುಡಿಯ ಎದುರು ಭಾಗದಲ್ಲಿ ಗುರುಕಂಬವಿದೆ.
ಗರೋಡಿಯ ಆವರಣದ ಒಳಗೆಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆ ಮತ್ತು ಕುಲತ ಜುಮಾದಿಯ ಕಲ್ಲಿನ ಮಂಚವಿದೆ. ಗರೋಡಿಯ ಅವರಣದ ಒಳಗೆ ಅಯ್ಯಕಲ್ಲು ಹಾಗೂ ತುಳಸೀಕಟ್ಟೆಗಳು ಇವೆ.
ಗರೋಡಿಯ ಪಕ್ಕದಲ್ಲಿ ಅಯ್ಯಪ್ಪ ಮಂದಿರವಿದೆ. ಗರೋಡಿಯ ಎದುರಿಗೆ ಕೆರೆ ಹಾಗೂ ಗರೋಡಿಯಿಂದ ಸ್ವಲ್ಪ ದೂರದಲಿ ನಾಗಬ್ರಹ್ಮಸ್ಥಾನವಿದೆ. ಗರೋಡಿಗೆ ಸಂಬಂಧಪಟ್ಟ ಜುಮಾದಿ ಮತ್ತು ಪಿಲ್ಚಂಡಿಯ 1ನೇ ಗಡುವಾಡು ಸ್ಥಾನ ಕಿದಿಯೂರಿನಲ್ಲಿಯೂ ಎರಡನೇ ಗಡುವಾಡು ಸ್ಥಾನ ಕಡೆಕಾರಿನಲ್ಲಿದೆ. ಎರಡೂ ಗಡುವಾಡು ಸ್ಥಾನಗಳಲ್ಲಿ ಗರೋಡಿಯಿಂದ ಬಾಲು ಬಂಡಾರ ಬಂದು ವರ್ಷಕ್ಕೊಮ್ಮೆ ಕೋಲ ನಡೆಯುತ್ತದೆ. ಕೋಲ ಇಲ್ಲದ ವರ್ಷ ಮಂಜ ಸೇವೆ ನಡೆಯುತ್ತದೆ.

ಸತೀಶ್ ಪೂಜಾರಿ

ಹರಿ ಪೂಜಾರಿ

ಸತೀಶ್ ಪೂಜಾರಿಯವರು ಈಗ ಗರೋಡಿಯ ಪೂಪೂಜನೆಯವರಾಗಿ ಹಾಗು ಹರಿ ಪೂಜಾರಿಯವರು ಇಲ್ಲಿಯ ಬೈದ್ಯರ ದರ್ಶನ ಸ್ಥಳ ಪಾತ್ರಿಯಾಗಿದ್ದಾರೆ. ಹರಿ ಪೂಜಾರಿಯವರಿಗಿಂತ ಮೊದಲು ಗುಡ್ಡ ಪೂಜಾರಿ, ಪಪ್ಪು ಪೂಜಾರಿಯವರು ಸ್ಥಳ ಪಾತ್ರಿಯಾಗಿದ್ದರು.
ಗರೋಡಿಯಲ್ಲಿ ಸಂಕ್ರಾಂತಿ (ಸೂಡ) ಪೂಜೆ ಚೌತಿಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಜುಮಾದಿಗೆ ಮುದ್ರೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜಯಿ ಸೇವೆ, ಸೋಣ ತೀಂಗಳಲ್ಲಿ ಅಗೆಲು ಸೇವೆ, ಬೈದೇರುಗಳ ನೇಮ, (ಪಂಬದರಿಂದ) ಕೊಡಿ ತಿಂಗಳಲ್ಲಿ ಅಗೆಲು, ಬೈದೇರುಗಳ ನೇಮ(ಪಂಬದರು) ಜುಮಾದಿ, ಮಾಯಂದಾಲ್,ಜೋಗಿಪರಯಷರಿಗೆ ಕೋಲ ಸೇವೆ ನಡೆಯುತ್ತದೆ. ಸುಗ್ಗಿ ತಿಂಗಳಲ್ಲಿ ಅಗೆಲು ಸೇವೆ ಹಾಗೂ ಬೈದೇರುಗಳ ನೇಮ ಸೇವೆ ಪರವರಿಂದ ನಡೆಯುತ್ತದೆ.
ಕಿದಿಯೂರು ಮತ್ತು ಕಡೆಕರು ಗ್ರಾಮದ ಮನೆಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಟ್ಟ ಜೋಡು ಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಇತ್ಯಾದಿ ಸೇವೆಗಳಲ್ಲಿ ಊರ ಭಕ್ತರು ಭಾಗಿಯಾಗುತ್ತಾರೆ.
ಸದ್ಯ ಗರೋಡಿಯ ಆಡಳಿತವು ಸರಕಾರದ ದತ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿದೆ. ಸ್ಥಿರ ಆದಾಯವಲ್ಲದ ಕಾರಣ ವಂತಿಗೆ, ಹರಕೆ, ಸಹಾಯಧನಗಳಿಂದ ಗರೋಡಿಯ ಎಲ್ಲಾ ಕಾರ್ಯಕ್ರಮಗಳ ವೆಚ್ಚ ಭರಿಸಲಾಗುತ್ತಿದೆ.
28-11-2003ರಲ್ಲಿ ಗರೋಡಿಯ ಜೀರ್ಣೋದ್ಧಾರಗೊಂಡಿತ್ತು.
ಬೊಗ್ಗು ಪರವ ಮೂಡುಬೆಳ್ಳೆ, ಕೃಷ್ಣ ಪಂಬದ ಕುತ್ಪಾಡಿ ಇವರುಗಳು ನೃತ್ಯವಿಶಾರದರಾಗಿ, ಮಡಿವಾಳರಾಗಿ ರಾಮ ಮಡಿವಾಳ, ವಾದ್ಯಕ್ಕೆ ಮೋಹನ ಕನ್ನರ್ಪಾಡಿ, ಡೋಲಿಗೆ ರವಿ ಮತ್ತು ಬಳಗ, ಅಂಬಲಪಾಡಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಯ ಪರಿಸರದಲ್ಲಿ ಶ್ರೀ ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾಮಂಡಳಿ(ರಿ) ಕಿದಿಯೂರು ಎಂಬ ಯಕ್ಷಗಾನ ಸಂಘವಿದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮಬೈದರ್ಕಳ ಹಾಗೂ ಧೂಮಾವತಿ ಗರೋಡಿ,
ಕಿದಿಯೂರು-ಕಡೆಕಾರು
ಕಿದಿಯೂರು ಅಂಚೆ, 576103.

ಮಾಹಿತಿ ಸಂಗ್ರಹಿಸಿದ ದಿನಾಂಕ:

19-11-2024