ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಬುಡ್ನಾರು
ಉಡುಪಿ ಇಂದ್ರಾಳಿ ರೈಲ್ವೆ ಸ್ಟೇಷನ್ ಎದುರಿನ ರಸ್ತೆಯಲ್ಲಿದೆ ಈ ಗರೋಡಿ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಇಂದಿಗೆ ಸುಮಾರು 300 ವರ್ಷಗಳ ಹಿಂದೆ ಬುಡ್ನಾರಿನ ದೊಡ್ಡ ಮನೆಯ ಯಜಮಾನರು ನಿಟ್ಟೂರಿನಿಂದ ಬುಡ್ನಾರಿಗೆ ಬಂದು ಮನೆ ಕಟ್ಟಿಸುತ್ತಿದ್ದರು. ಮೇಸ್ತಿç ಮನೆ ಕಟ್ಟುವಾಗ ಏನು ಉಪಾಯ ಮಾಡಿದರೂ ಕಟ್ಟಿದ ಗೋಡೆ ಮತ್ತೆ ಮತ್ತೆ ಕುಸಿದು ಬೀಳುತ್ತಿತ್ತು. ಯಜಮಾನರು ಪ್ರಶ್ನಾ ಚಿಂತನೆ ಮಾಡಿಸಿದರು. ಆಗ ಕೋಟಿಚೆನ್ನಯರು ಜಾಗದ ಹತ್ತಿರದಲ್ಲೇ ನೆಲೆಯಾಗಿದ್ದಾರೆ. ನಿಮ್ಮಿಂದ ಗರೋಡಿ ನಿರ್ಮಾಣ ಬಯಸುತ್ತಾರೆ. ಆಗ ಯಜಮಾನರು ಗರೋಡಿ ಕಟ್ಟಿಸಲು ಸೂಕ್ತ ಜಾಗ ತೋರಿಸುವಂತೆ ಕೇಳುತ್ತಾರೆ. ಆಗ ಹತ್ತಿರದಲ್ಲೇ ಇರುವ ಬಾವಿಯನ್ನು ಶುದ್ಧಗೊಳಿಸುವಂತೆ ತೋರಿ ಬರುತ್ತದೆ.
ಬಾವಿ ಶುದ್ಧಗೊಳಿಸುವಾಗ ಕೋಟಿಚೆನ್ನಯರು ನೆಲೆಯಾಗಿದ್ದ ಕುರುವಾಗಿ ಬಾವಿಯಲ್ಲಿ ನಾಗ ಬ್ರಹ್ಮರ ಮೂರ್ತಿ, ಸುರಿಯಗಳು ದೊರೆಯುತ್ತವೆ. ಯಜಮಾನರು ಊರವರನ್ನು ಸೇರಿಸಿ ಬಾವಿಯ ಪಕ್ಕದಲ್ಲೇ ಗರೋಡಿ ಕಟ್ಟಿಸುತ್ತಾರೆ. ಯಜಮಾನರ ಮನೆಯ ನಿರ್ಮಾಣವೂ ಆಗುತ್ತದೆ. ಲವರು ತನ್ನ ಮನೆಗೆ ನೇರ ಗರೋಡಿ ಕಾಣುವಂತೆ ಹೆಬ್ಬಾಗಿಲನ್ನು ಇರಿಸಿದ್ದು ಈಗಲೂ ಹಾಗೆಯೇ ಇದೆ. ನಾಗ ಬ್ರಹ್ಮರ ಮೂರ್ತಿ ಹಗೂ ಸುರಿಯ ಸಿಕ್ಕಿದ ಬಾವಿಯಲ್ಲಿ ಮಳೆಗಾಲ, ಬೇಸಿಗೆ, ಎನ್ನದೆ ಯಾವಾಗಲೂ ನೀರು ಒಂದೇ ಮಟ್ಟದಲ್ಲಿ ತುಂಬಿರುತ್ತದೆ. ಸುರಿಯವನ್ನು ಗರೋಡಿಯೊಳಗೆ ಕಪಾಟಿನಲ್ಲಿ ಜೋಪಾನವಾಗಿ ಇಡಲಾಗಿದೆ. ಇದನ್ನೆಲ್ಲಾ ಗಮನಿಸುವಾಗ ಪ್ರಾಯಶ: ಇಲ್ಲಿ ಮೊದಲೇ ಗರೋಡಿಯಿದ್ದು, ಕಾಲಾಂತರದಲ್ಲಿ ಅಳಿಗುಳಿಯಾಗುವಾಗ ಬ್ರಹ್ಮರ ಮೂರ್ತಿ ಹಾಗೂ ಸುರಿಯವನ್ನು ಬಾವಿಗೆ ಹಾಕಿರ ಬಹುದು.
ಕೋಟಿಚೆನ್ನಯರು ಉಡುಪಿ ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿಗೆ ಬಂದಿದ್ದಾಗ ಇಲ್ಲಿನ ಬಂಡಸಾಲೆ ತೋಟದಲ್ಲಿ ಸುರಿಯ ಊರಿದಾಗ ಚಿಮ್ಮಿದ ಕೆಂಪು ನೀರನ್ನು ಕಂಡು ಇಲ್ಲಿನ ಣೀರು ನಂಜು, ಇಲ್ಲಿಯ ಪೋಲಿ ಕೂಟ ನಮಗಾಗದು ಎಂದು ಬುಡ್ನಾರಿಗೆ ತೆರಳಿದ್ದರಂತೆ.
ಶಿವಳ್ಳಿ ಮೂಡು ಪೆರಂಪಳ್ಳಿಯಿಂದ ಹೊರಟ ಕೋಟಿಚೆನ್ನಯರು ಕೃಷ್ಟಾಷ್ಟಮಿಯಂದು ಬುಡ್ನಾರಿಗೆ ಬಂದಿದ್ದರು ಎಂಬುದು ಪ್ರಚಾರದಲ್ಲಿದೆ. ಆ ಕಾರಣಕ್ಕಾಗಿ ಗರೋಡಿಯಲ್ಲಿ ಅಷ್ಟಮಿಯ ಮರುದಿವಸ ಅಗೆಲ್ ಅನ್ನ ನೈವೇದ್ಯ, ನೇಮೋತ್ಸವಗಳು ನಡೆಯುತ್ತವೆ.
ಗರೋಡಿಯ ಬ್ರಹ್ಮ ಗುಡಿಯೊಳಗೆ ಗುಂಡದಲ್ಲಿ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ. ಗುಂಡದ ಎಡಭಾಗದಲ್ಲಿ ಉಯ್ಯಾಲೆಯಲ್ಲಿ ಗಿಂಡೆ ಇಟ್ಟು ಕೋಟಿಚೆನ್ನಯರ ಆರಾಧನೆ ಹಾಗೂ ಜೋಗಿ ಪುರುಷರ ಮಣೆ ಮಂಚವಿದೆ. ಗುಂಡದ ಬಲಭಾಗದಲ್ಲಿ ಕುಲತ ಜುಮಾದಿಯ ಮಂಚ, ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ ಹಾಗೂ ಕುಜುಂಬ ಕಾಂಜವರ ಮಣೆ ಮಂಚಗಳಿವೆ. ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಜುಮಾದಿ ಹಾಗೂ ಬಂಟ, ಮರ್ಲಜುಮಾದಿ ಹಾಗೂ ಬಂಟ , ಪಂಚ ಭೂತ (ಐವೆರ್ ಭೂತ) ಹಾಗೂ ಗುರು ಕಂಬದ ಆರಾಧನೆಯಿದೆ.
ಗರೋಡಿಯ ಪರಿಸರದಲ್ಲಿ ನಾಗ ಬನ, ಗುಡಿಯೊಂದರಲ್ಲಿ ನಂದಿಗೋಣ, ಮೂಲ ಮೈಸಂದಾಯ, ಹಾಗೂ ಪಂಜುರ್ಲಿ ದೈವಗಳ ಆರಾಧನೆಯಿದೆ.
ಗೋಪಾಲ ಪೂಜಾರಿ
2010ರಿಂದ ಗೋಪಾಲ ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಬೊಗ್ರ ಪೂಜಾರಿ, ಕಾಡ್ಯ ಪೂಜಾರಿ, ಕಿಟ್ಟು ಪೂಜಾರಿ, ತಮ್ಮಯ್ಯ ಪೂಜಾರಿ ಈ ಸೇವೆ ಮಾಡಿದ್ದರು. ಈ ಗರೋಡಿಯಲ್ಲಿ ಈಗ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಸದಾನಂದ ಪೂಜಾರಿ, ಬೇಡು ಪೂಜಾರಿ, ಐತು ಪೂಜಾರಿಯವರು ಸ್ಥಳ ಪಾತ್ರಿಗಳಾಗಿ ಈ ಗರೋಡಿಯಲ್ಲಿ ಸೇವೆ ಮಾಡಿದ್ದರು.
ಶೇಖರ ಶೆಟ್ಟಿ
ಶೇಖರ ಶೆಟ್ಟಿ ಬುಡ್ನಾರು ದೊಡ್ಡಮನೆ, ಇವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಸೋಣ ತಿಂಗಳಲ್ಲಿ ಹೂವಿನ ಪೂಜೆ, ದರ್ಶನ ಸೇವೆ, ಗಜ್ಜಯಿ ಸೇವೆ, ಕದಿರುಕಟ್ಟುವ ಸಂಪ್ರದಾಯವಿದೆ. ಕೊಡಿ ತಿಂಗಳಲ್ಲಿ ಅಗೆಲ್, ಅನ್ನ ನೈವೇದ್ಯ ಸೇವೆ, ಮರುದಿವಸ ಹುಣ್ಣಿಮೆಯಂದು ಬೈದೇರುಗಳ ನೇಮೋತ್ಸವ, ಮರುದಿನ ಮದ್ಯಾಹ್ನ ನಂತರ ಮಾಯಂದಾಳ್ ನೇಮ, ರಾತ್ರಿ ಜುಮಾದಿ, ಮರ್ಲಜುಮಾದಿ, ಪಿಲ್ಚಂಡಿ, ಕೋಲಗಳು ನಡೆಯುತ್ತವೆ. ಪಗ್ಗು ತಿಂಗಳಲ್ಲಿ ಸೌರ ಮಾನ ಯುಗಾದಿಯ ಮರುದಿನ ಅಗೆಲ್ ಸೇವೆ, ಮರುದಿನ ನೇಮೋತ್ಸವ ನಡೆಯುತ್ತದೆ.
ಆವರಣದೊಳಗಿನ ಇನ್ನೊಂದು ಗುಡಿಯಲ್ಲಿ ಜಾರಂದಾಯ ಮತ್ತು ಬಂಟ, ಜುಮಾದಿ, ನಂದಿಗೋಣ, ಮೈಸಂದಾಯ, ಪಂಜುರ್ಲಿ, ಕುಕ್ಕಿನಂತಾಯ ದೈವಗಳ ಮಣೆ ಮಂಚವಿದೆ. ಪಕ್ಕದ ಇನ್ನೊಂದು ಗುಡಿಯಲ್ಲಿ ಹುಲಿ ಚಾಮುಂಡಿ ದೈವದ ಮಣೆ ಮಂಚವಿದೆ.
ಬುಡ್ನಾರು, ಮಂಚಿ, ಚಿಟ್ಪಾಡಿ, (76 ಬಡಗಬೆಟ್ಟು) ಕಂಚಿಗಾರಗುಳಿ, ಮೂಡು ಪೆರಂಪಳ್ಳಿ, ಕುಂಜಿಬೆಟ್ಟು, ಪಣಿಯಾಡಿ, ಕಡಿಯಾಳಿ ಗ್ರಾಮಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಕೂಡುಕಟ್ಟಿಗೆ ಸೇರಿದವರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಬೊಗ್ಗು ಪರವ, ಜಯ ಪರವ, ಮನ್ಮಥ ಪರವ ಇವರು ಈ ಗರೋಡಿಯ ನೃತ್ಯ ವಿಶಾದರರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಬುಡ್ನಾರು,
ಇಂದ್ರಾಳಿ ರೈಲ್ವೇ ಸ್ಟೇಷನ್ ಎದುರು,
ಅಂಚೆ ಕುಂಜಿಬೆಟ್ಟು, ಶಿವಳ್ಳಿ ಗ್ರಾಮ,
ಉಡುಪಿ ತಾಲೂಕು 576012.
ಪೂ ಪೂಜನೆಯವರ ವಿಳಾಸ:
ಗೋಪಾಲ ಪೂಜಾರಿ,
ಬುಡ್ನಾರು ಗರೋಡಿ ಮನೆ,
ಇಂದ್ರಾಳಿ ಉಡುಪಿ
ಮೊಬೈಲ್: 9880074241.
ಮಾಹಿತಿ ಸಂಗ್ರಹಿಸಿದ ದಿನಾಂಕ:
27-07-2022