ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ
ಉಡುಪಿಯಿಂದ ಕಲ್ಯಾಣಪುರ ಸಂತೆಕಟ್ಟೆ ಕಡವಿನ ಬಾಗಿಲು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ಸಾಗಿ ಬಲಕ್ಕೆ ತಿರುಗಿ ಕಾಡಿನ ರಸ್ತೆಯಲ್ಲಿ ಮುಂದುವರಿದು ಗರೋಡಿ ತಲುಪಬಹುದು. ಗರೋಡಿಯು ಪ್ರಕೃತಿ ರಮಣೀಯ ಸುವರ್ಣಾ ನದೀ ತಟದಲ್ಲಿದೆ.
ಇದು ಆಯದ ಗರೋಡಿಯಾಗಿದ್ದು ಇಲ್ಲಿ ಷಡಾಧಾರ ಪ್ರತಿಷ್ಠೆ ಆಗಿದೆ.
1983ರಿಂದ ಇಲ್ಲಿ ಶ್ರೀ ಮೋಹನ್ ಪೂಜಾರಿಯವರು ಪೂ ಪೂಜನೆದಾರರಾಗಿದ್ದಾರೆ. 1955ರಿಂದ 1983ರವರೆಗೆ ಮೋಹನ್ ಪೂಜಾರಿ ಅವರ ತಂದೆ ಅನಂತ ಪೂಜಾರಿ ಪೂ ಪೂಜನೆಯವರಾಗಿದ್ದರು. 1955ರ ಮೊದಲು ಅನಂತ ಪೂಜಾರಿ ಅವರ ಮಾವ ಪಿಜಿನ ಪೂಜಾರಿಯವರು ಪೂಜನೆಯವರಾಗಿದ್ದರು.
ಪಕ್ಕಿಬೆಟ್ಟು ಗರೋಡಿಯಲ್ಲಿ ಶ್ರೀ ಸತೀಶ್ ಪೂಜಾರಿ ಹಾಗೂ ಶಂಕರ ಪೂಜಾರಿ ಸ್ಥಳ ಪಾತ್ರಿಗಳಾಗಿದ್ದಾರೆ. ಇವರು ಸೇವೆಗೆ ಬರುವ ಮೊದಲು ಗುರುವ ಪೂಜಾರಿ ಹಾಗೂ ಚಂದು ಪೂಜಾರಿಯವರು ಸ್ಥಳ ಪಾತ್ರಿಗಳಾಗಿದ್ದರು
ಇಲ್ಲಿ ಆಡಳಿತ ಸಮಿತಿಯು ಗರೋಡಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ
ಸುಮಾರು 400 ವರ್ಷಗಳ ಹಿಂದೆ ಪಕ್ಕಿಬೆಟ್ಟು ಗರೋಡಿಯನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಗರೋಡಿಯ ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ,
ಮೊದಲು ಇಲ್ಲಿ ಪಕ್ಕಿಬೆಟ್ಟು ಪಂಜುರ್ಲಿ ಸಾನ್ನಿಧ್ಯವಿತ್ತು. ಈ ಊರಿನಲ್ಲಿ ಒಂದು ಗರೋಡಿ ಸ್ಥಾಪಿಸಬೇಕು ಎಂದು ಇಲ್ಲಿಗೆ ಕೋಟಿ ಚೆನ್ನಯರು ಬಂದಿದ್ದರು. ಅವರು ಇಲ್ಲೇ ಹತ್ತಿರದ ವೀರಭದ್ರ ದೇವಸ್ಥಾನದ ಬಳಿಯ ಕಟ್ಟೆಯಲ್ಲಿ ಕುಳಿತು ಗೆಂದಾಳಿ ಸೀಯಾಳವನ್ನು ಕತ್ತಿಯಿಂದ ಕೆತ್ತುವಾಗ ಒಂದು ಕೆತ್ತೆ “ಪಂಜುರ್ಲಿ”ಮಹಿಮೆಯಿಂದ ಹಕ್ಕಿಯಂತೆ ಹಾರಿ ಬಂದು ಇಲ್ಲಿ ಬಿತ್ತು. ಅದನ್ನು ಕಂಡ ಹಿರಿಯರು ಇಲ್ಲೇ ಗರೋಡಿ ಕಟ್ಟಲು ನಿರ್ಧರಿಸಿದರು. ಈ ಗರೋಡಿಯಲ್ಲಿ ಪಂಜುರ್ಲಿಗೆ ವಿಶೇಷ ಸ್ಥಾನಮಾನವಿದೆ.
ಗುಂಡದ ಒಳಗೆ ಬ್ರಹ್ಮರಮೂರ್ತಿ, ಗಾಳಿ ದೇವರು. ಎಡಭಾಗದಲ್ಲಿ ಕೋಟಿ ಚೆನ್ನಯರ ಆಳೆತ್ತರದ ಪಾಪೆ, ಬಲಭಾಗದಲ್ಲಿ ಕುಜುಂಬ ಕಾಂಜವನ ಪಾಪೆ, ಮೈಸಂದಾಯ ಪಂಚಲೋಹದ ಮುಖ ಇದೆ. ಗುಂಡದ ಹೊರಗೆ ವಾಲಗ ಚಾವಡಿಯಲ್ಲಿ ಅಣ್ಣಪ್ಪ ಪಂಜುರ್ಲಿ ಮೂರ್ತಿ, ಕುಲತ ಜುಮಾದಿ ಮುಂಡಿಗೆ, ಮಾಯಂದಾಳ್ ಮತ್ತು ಮಗುವಿನ ಪಾಪೆ, ಕತ್ತರಿಮಂಚದಲ್ಲಿ ಕೊಡಂಗ ಪಂಜುರ್ಲಿ, ಗುರುಕಂಬ ಹಾಗೂ ಜೋಗಿ ಪುರುಷ ಪಾಪೆ ಇದೆ.
ಈ ಗರೋಡಿಯಲ್ಲಿ ನಿತ್ಯ ದೀಪ ಹಚ್ಚುತ್ತಾರೆ. ಆದಿತ್ಯವಾರ-ವಿಶೇಷ ಪೂಜೆ, ಮಂಗಳವಾರದ ಪೂಜೆ ಇದೆ. ಉಳಿದಂತೆ ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ದೀಪಕಂಬ ಇಟ್ಟು ಬಲಿಯೇಂದ್ರನನ್ನು ಕರೆಯುವ ಕ್ರಮ ಇದೆ. ಹೂವಿನ ಪೂಜೆ, ಕದಿರುಕಟ್ಟುವುದು, ಊರುಸೇರಿ ಗಜ್ಜೆಯಿ ಸೇವೆ ಇದೆ. ಅಗೆಲ್ ಸೇವೆ ಇದೆ. ನೇಮೋತ್ಸವ ಇದೆ. ಗರೋಡಿಯ ಹೊರಗೆ ಪಂಜುರ್ಲಿಗೆ ಭೋಗ ಇದೆ.
ಪಕ್ಕಿಬೆಟ್ಟು ಗರೋಡಿಯ ಕೂಡುಕಟ್ಟಿನಲ್ಲಿ ಸುಮಾರು 1400 ಮನೆಗಳಿವೆ. ಪಕ್ಕಿಬೆಟ್ಟು, ಕಡವಿನ ಬಾಗಿಲು, ಕೊಳಂಬೆ ಮೂಡುಬೆಟ್ಟು ಅರ್ಕಳಬೆಟ್ಟು, ಪುತ್ತೂರು, ನಯಂಪಳ್ಳಿ, ತೆಂಕು ನಯಂಪಳ್ಳಿ, ಮಾವಿನಕುದ್ರು ಹೀಗೆ ಒಂಭತ್ತು ಊರುಗಳಿವೆ. ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಜೋಡುಕಾಯಿ ಕಾಣಿಕೆ ತೆಗೆದಿಡುತ್ತಾರೆ. ಅಕ್ಕಿ, ತೆಂಗಿನಕಾಯಿ, ಸೀಯಾಳ, ಪಿಂಗಾರದಲ್ಲಿ ತುಲಾಭಾರ ನಡೆಸುವುದಿದೆ. ವಿಶೇಷ ಸಂದರ್ಭದಲ್ಲಿ ಕಲಶ ಕಟ್ಟಿ ಶುದ್ಧ ಮಾಡುವ ಕ್ರಮ ಇದೆ.
ಗರೋಡಿಯ ಹೊರಗೆ ಬಾಗಿಲ ಬೊಬ್ಬರ್ಯ ಮೂರ್ತಿ ಇದೆ. ಆವರಣದಲ್ಲಿ ತನ್ನಿಮಾನಿಗ, ಅಜಕಾಯಿ ಕಲ್ಲು, ನೀಚ ದೈವವಿದೆ. ಗರೋಡಿ ಎದುರಿನಲ್ಲಿ ಹೊರಗೆ ನಾಗಬನ, ಹತ್ತಿರದಲ್ಲೇ ಕೆರೆ ಇದೆ.
ಗರೋಡಿಗೆ 13 ಸೆಂಟ್ಸ್ ಜಾಗ ಇದೆ.
ಗರೋಡಿ ಜೀರ್ಣೋದ್ಧಾರ
17-03-1927 : ಮಾಡಿಗೆ ಹಂಚು ಹಾಕಿ ಪುನರ್ಪ್ರತಿಷ್ಠೆ
03-03-1963 – ಬ್ರಹ್ಮಕಲಶ
22-04-1995 – ಜೀರ್ಣೋದ್ಧಾರ
28-04-2008 – ಜೀರ್ಣೋದ್ಧಾರ
2023-2024ರಲ್ಲಿ ಜೀರ್ಣೋದ್ಧಾರ ನಡೆಸಲು ಸಕಲ ಸಿದ್ಧತೆಗಳಾಗುತ್ತಿರುವ ಬಗ್ಗೆ 9-07-2022ರಲ್ಲಿ ಗರೋಡಿ ವಕ್ತಾರರು ತಿಳಿಸಿರುತ್ತಾರೆ.
ಈ ಗರೋಡಿಗೆ ಬೊಗ್ಗು ಪರವ, ಬೂಬ ಪರವ, ಸಂತೋಷ ಪರವ ನೃತ್ಯ ವಿಶಾರದರಾಗಿ ಸೇವೆಗೆ ಬರುತ್ತಾರೆ. ಹಿಂದೆ ನರಂಗ ಪರವ, ಬೂಬ ಪರವನ ತಂದೆ ಬೆರ್ಮು ಪರವ ನೃತ್ಯವಿಶಾರದರಾಗಿದ್ದರು.
ಗರೋಡಿಯ ಹೊರಗೆ ಪ್ರತ್ಯೇಕ ಗುಂಡವನ್ನು ಇರಿಸಲಾಗಿದ್ದು, ಇದು ಅಗೆಲು ಸೇವೆ, ನೇಮೋತ್ಸವದ ದಿನ ಉಪಯೋಗಕ್ಕೆ ಬರುತ್ತದೆ. ಅಂಗಣದಲ್ಲಿ ಇದನ್ನು ಇರಿಸಿ ಎದುರಿನಲ್ಲಿ ದಲ್ಲೆ ಹಾಕಲಾಗುವುದು. ಮೊದಲು ಭತ್ತದಲ್ಲಿ ಎರಡು ಮನುಷ್ಯಾಕೃತಿಗಳನ್ನು ನಿರ್ಮಿಸಲಾಗುವುದು. ಇದರ ಮೇಲೆ ನೀರೊಳಿಗೆ ಎಲೆಯನ್ನು ಹಾಕಲಾಗುವುದು. ಇದನ್ನು ಬಾಳೆದಿಂಡಿನ ದಪ್ಪ ಸಿಪ್ಪೆಯಿಂದ ಹೊದಿಸಲಾಗುವುದು.
ಬಾಗಿಲ ಬೊಬ್ಬರ್ಯ:-
ಅದೊಂದು ಕಾಲದಲ್ಲಿ ಪಕ್ಕಿಬೆಟ್ಟು ಗರೋಡಿಯ ಮಾಡು ಸಂಪೂರ್ಣ ಕೆಟ್ಟು ಹೋಗಿದ್ದ ಸಂದರ್ಭದಲ್ಲಿ ಅದಕ್ಕೆ ಬೇಕಾಗಿದ್ದ ಬಿದಿರನ್ನು ತರಲು ಹಿರಿಯರಾದ ಅಣ್ಣು ಪೂಜಾರಿಯವರು ಘಟ್ಟಕ್ಕೆ ಹೋಗಿದ್ದರಂತೆ. ಅವರು ಬಯಸಿದ ರೇಟಿಗೆ ಬಿದಿರು ಸಿಕ್ಕದಾಗ ವಾಪಾಸು ಬಂದು ಬೈದೇರುಗಳ ದರುಶನದಲ್ಲಿ ನಿಮಗೆ ಬೇಕಾದಲ್ಲಿ ಗರೋಡಿ ಬೀಳುವುದನ್ನು ಉಳಿಸಿಕೊಳ್ಳಿ ಅನ್ನುತ್ತಾರೆ. ಆಗ ಬೈದೇರುಗಳು ಮೂರು ಎಲೆ ಗಂಧ ತೆಗೆದುಕೊAಡು ಸುವರ್ಣಾನದಿಯಲ್ಲಿನ ಪಕ್ಕಿಬೆಟ್ಟು ಗುಂಡಿಗೆ ಹಾಕಲು ಹೇಳುತ್ತಾರೆ. ಹಾಗೆ ಮಾಡಿದಾಗ-ಅದೇ ಗುಂಡಿಯಲ್ಲಿ ಬಿದಿರಿನ ಹಿಂಡು ಮೇಲೆದ್ದು ಬಂದಾಗ ಅದರಿಂದ ಮತ್ತೆ ಗರೋಡಿ ಕಟ್ಟುತ್ತಾರೆ.
ಆ ಬಿದಿರ ಹಿಂಡು ಘಟ್ಟದ್ದೇ ಆಗಿತ್ತು. ಮತ್ತೊಂದು ವಿಶೇಷವೆಂದರೆ ಆ ಬಿದಿರ ಹಿಂಡಿನೊಳಗಡೆ ಬೊಬ್ಬರ್ಯನ ಪಾಪೆ ಇತ್ತು. ಆ ಬಿದಿರನ್ನು ಬೊಬ್ಬರ್ಯನೇ ತಂದಿದ್ದು ಎಂಬ ನಂಬಿಕೆ. ಇದೇ ಬೊಬ್ಬರ್ಯ ಬಾಗಿಲು ಬೊಬ್ಬರ್ಯನಾಗಿದ್ದಾನೆ.
ಸಂಪಿಗೆ ಮರಗಳು :
ಇಲ್ಲಿ ವರ್ಷದ 365ದಿನಗಳಲ್ಲೂ ಹೂವು ಬಿಡುವ ಎರಡು ಸಂಪಿಗೆ ಮರಗಳಿದ್ದು ಇವು 400 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಜೀರ್ಣೋದ್ಧಾರ ಕಾಲದಲ್ಲೂ ಈ ಮರಗಳನ್ನು ಕಡಿಯಲು ಬೈದೇರುಗಳು ಒಪ್ಪಿಗೆ ನೀಡಿಲ್ಲ.
ಕಕ್ಕುಂಜೆ ಗರೋಡಿಗೆ ಕಾರಣ
ಒಮ್ಮೆ ಪಕ್ಕಿಬೆಟ್ಟು ಗರೋಡಿ ಪುನರ್ನಿರ್ಮಾಣ ಆಗುತ್ತಿರುವಾಗ ಗೋಡೆ ಕಟ್ಟುವ ವಿಚಾರದಲ್ಲಿ ಕಕ್ಕುಂಜೆಯ ಗುರಿಕಾರರುಗಳಿಗೆ ಅಸಮಾಧಾನವಾಗಿ, ಅವರು ತಮ್ಮದೇ ಒಂದು ಕೂಡುಕಟ್ಟನ್ನು ಕಟ್ಟಿಕೊಂಡು ಗರೋಡಿ ನಿರ್ಮಿಸುವ ಬಗ್ಗೆ ತೀರ್ಮಾನಿಸುತ್ತಾರೆ. ಅದರಂತೆ ಕಕ್ಕುಂಜೆಯಲ್ಲಿ ಹೊಸ ಗರೋಡಿ ನಿರ್ಮಾಣವಾಯಿತು.
ಸಂಕು ಬಾಲೆಗೆ ಪ್ರಸಾದ
1927ರಲ್ಲಿ ಗರೋಡಿ ಜೀರ್ಣೋದ್ಧಾರಗೊಳ್ಳುತ್ತಿದ್ದ ಕಾಲ. ಸಂಕು ಎಂಬ ಮಹಿಳೆ ದೋಣಿಯಲ್ಲಿ ಬರುತ್ತಿರಬೇಕಾದರೆ ಗರೋಡಿ ಬಳಿಯಲ್ಲಿ ಹೊಳೆಯಲ್ಲಿ ದೋಣಿ ಸುರುಳಿ ಸುತ್ತ ತೊಡಗಿದಾಗ ಅವರು ಗರೋಡಿಗೆ ಗುಂಡ ಕಟ್ಟಿಸಿಕೊಡುವುದಾಗಿ ಹರಕೆ ಹೇಳುತ್ತಾರೆ. ಸುರಕ್ಷಿತರಾಗಿ ದಡ ಸೇರುತ್ತಾರೆ. ಸಂಕು ಅವರು ಗುಂಡ ಕಟ್ಟಿಸಿದ್ದು ಗರೋಡಿಯಲ್ಲಿ ಇದೀಗಲೂ ಅವರ ಮನೆತನಕ್ಕೆ ಸಂಕುಬಾಲೆ ಅಂತ ಕರೆದು ಗೌರವಿಸುವ, ಪ್ರಸಾದ ನೀಡುವ ಪದ್ಧತಿಯಿದೆ.
2024-25 ರಲ್ಲಿ ಗರೋಡಿಯು ಜೇರ್ಣೋದ್ಧಾರಗೊಂಡು ಶಿಲಾಮಯ ಗರೋಡಿಯಾಗಿ ಮೂಡಿಬರಲಿದೆ.
ಪೂ ಪೂಜನೆಯವರ ವಿಳಾಸ :
ಮೋಹನ್ ಪೂಜಾರಿ
ಪಕ್ಕಿಬೆಟ್ಟು ಗರೋಡಿಮನೆ,
ಅಂಚೆ ಕಲ್ಯಾಣಪುರ,
ಫೋನ್ ನಂಬರ್ – 99453 61812
ಪಕ್ಕಿಬೆಟ್ಟು ಗರೋಡಿಮನೆ,
ಅಂಚೆ ಕಲ್ಯಾಣಪುರ,
ಫೋನ್ ನಂಬರ್ – 99453 61812
ಮಾಹಿತಿ ಸಂಗ್ರಹಿಸಿದ ದಿನಾಂಕ:
09-07-2022