ಶ್ರೀ ಬ್ರಹ್ಮಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಉದ್ಯಾವರ ಕುತ್ಪಾಡಿ ಗರೋಡಿ
ಉಡುಪಿ ರಾಷ್ಟ್ರೀಯ ಹೆದ್ದಾರಿಯಿಂದ ಕಿನ್ನಿಮೂಲ್ಕಿ ಬಲಾಯಿಪಾದೆಯಲ್ಲಿ ಪಶ್ಚಿಮಕ್ಕೆ ತಿರುಗಿ 1 ಕಿ.ಮೀ. ಸಾಗಬೇಕು.
ಉದ್ಯಾವರ ಕುತ್ಪಾಡಿಯ ಶ್ರೀ ಬ್ರಹ್ಮಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಗರೋಡಿಯು ಬಹಳ ಪುರಾತನವಾದುದು. ಇದು ಆಯದ
ಗರೋಡಿಯಾಗಿದ್ದು 2009 ರಲ್ಲಿ ಷಡಾಧಾರ ಪ್ರತಿಷ್ಠೆಗೊಂಡಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಆದಿಉಡುಪಿಯ ಪಾಳೇಗಾರ ಪಲ್ಪಟ್ ನಾಯಕರು ಬೇರೆ ಊರಿಗೆ ಯಾವುದೋ ಒಂದು ಸಾಧನೆಗೆ ಹೊರಟು ಹೋಗುತ್ತಿದ್ದಾಗ ಕಿನ್ನಿಮೂಲ್ಕಿಯ ಬಲಾಯಿಪಾದೆ ಬಳಿ ಕುದುರೆ ಮುಗ್ಗರಿಸಿ ಕುಳಿತಿತು. ಅದು ಏದ್ದೇಳದಿದ್ದಾಗ ಪ್ರಶ್ನಾ ಚಿಂತಕರಲ್ಲಿ ಕೇಳಿದರು. ಇಲ್ಲಿ ಕೋಟಿ ಚೆನ್ನಯರು ಗರೋಡಿ ಕಟ್ಟಲು ಬಯಸಿದ್ದಾರೆ ಎಂಬುದಾಗಿ ತಿಳಿದು ಬಂತು. ತಾನು ಕೈಗೊಂಡ ಕಾರ್ಯದಲ್ಲಿ ಗೆದ್ದು ಬಂದರೆ ಗೋಡೆಗೆ ತುಪ್ಪ ಬಳಸಿ ಗರೋಡಿ ಕಟ್ಟುವುದಾಗಿ ಪಲ್ಪಟ್ ನಾಯಕರು ಪ್ರಾರ್ಥಿಸುತ್ತಾರೆ. ಅವರ ಕುದುರೆ ಎದ್ದು ನಿಲ್ಲುತ್ತದೆ. ಅವರು ಯೋಚಿಸಿದ ಕಾರ್ಯ ನೆರವೇರಿದ ಬಳಿಕ ಗರೋಡಿ ಕಟ್ಟಲು ಜಾಗ ಹುಡುಕುತ್ತಾರೆ. ಗರೋಡಿ ಸ್ಥಳ ಆರಿಸಲು ತೆಂಗಿನಕಾಯಿ/ ಚೆಂಡು ಹಾರಿಸಿದಾಗ ಅದು ಈಗ ಗರೋಡಿ ಇರುವ ಮುಳ್ಳಿನ ಬಲ್ಲೆಯ ಜಾಗದಲ್ಲಿ ಬೀಳುತ್ತದೆ. ಇದೇ ಜಾಗದಲ್ಲಿ ಅಂಬಲಪಾಡಿ ಮಹಾಂಕಾಳಿಯ ವಾಹನ ಹುಲಿಚಾಮುಂಡಿ ಮೊದಲೇ ನೆಲೆಯಾಗಿತ್ತು. ಚಾಮುಂಡಿಯೇ ಬೈದೇರುಗಳನ್ನು ಕರೆಸಿಕೊಂಡರು ಎಂಬ ಕಾರಣಕ್ಕೆ ಇಲ್ಲಿ ಹುಲಿಚಾಮುಂಡಿಗೆ ಮೊದಲ ಗೌರವವನ್ನು ಕೊಡಲಾಗುತ್ತದೆ. ಪಲ್ಪಟ್ ನಾಯಕರು ಇಲ್ಲಿ ಗರೋಡಿ ಕಟ್ಟುವಾಗ ಧಾರಾಳ
ತುಪ್ಪವನ್ನು ಬಳಸಿದ್ದಾರೆ. ಇಲ್ಲಿ ಗರೋಡಿ ಜೀರ್ಣೋದ್ಧಾರಗೊಳ್ಳುವಾಗ ಈಗಲೂ ಸಾಂಕೇತಿಕವಾಗಿ ತುಪ್ಪವನ್ನು ಗೋಡೆಗೆ ಸುರಿಯುತ್ತಾರೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಮೇಲೆ ಗಾಳಿ ದೇವರಿಗೆ ಗಿಂಡೆ ಇದೆ. ಕೆಳಗೆ ಬ್ರಹ್ಮರ ಮೂರ್ತಿ, ಗುಂಡದ ಎಡಕ್ಕೆ ಕೋಟಿ ಚೆನ್ನಯರ ಪಾಪೆ ಹಾಗು ಇಬ್ಬರು ಮಕ್ಕಳ ಪಾಪೆ ಇದೆ. ಗುಂಡದ ಬಲಕ್ಕೆ : ಕುಜುಂಬ ಕಾಂಜವ ಮತ್ತು ಮಗು. ಕಿನ್ನಿದಾರು -ಮಂಚ, ಒಕ್ಕು ಬಲ್ಲಾಳ ಮತ್ತು ಮಗು. ದೇಯಿಬೈದೆತಿ-ಉಯ್ಯಾಲೆಗಳಿವೆ.
ಹೊರಗೆ ವಾಲಗ ಚಾವಡಿಯಲ್ಲಿ : ಮೈ ಸಂದಾಯ, ಜಾರಂದಾಯ, ಪಟ್ಕಂತಾಯ, ಪಂಜುರ್ಲಿ, ಬೊಬ್ಬರ್ಯ, ಜೋಗಿ ಪುರುಷ, ಪಂಚಧೂಮಾವತಿ, ವ್ಯಾಘ್ರ ಚಾಮುಂಡಿ, ಗುರುಕಂಬಗಳಿವೆ.
ಗರೋಡಿಯ ಆವರಣದೊಳಗೆ : ವ್ಯಾಘ್ರ ಚಾಮುಂಡಿ, ಮಾಯಂದಾಲ್ ಮತ್ತು ಮಗು. ಕೊಳತ ಜುಮಾದಿ, ಅಜಕಾಯಿ ಕಲ್ಲುಗಳಿವೆ.
ಗರೋಡಿಯ ಹೊರ ಆವರಣದಲ್ಲಿ : ನಾಗ ಸನ್ನಿಧಿ, ನಾಗ ಬ್ರಹ್ಮಸ್ಥಾನ-ಬ್ರಹ್ಮ, ರಕ್ತೇಶ್ವರಿ, ನಂದಿಗೋಣ, ಬೊಬ್ಬರ್ಯ, ಕ್ಷೇತ್ರಪಾಲ, ಬೈಕಾಡ್ತಿ ಪಂಜುರ್ಲಿ ದೈವಗಳ ಸಾನಿದ್ಯವಿದೆ.
ದಯಾನಂದ ಪೂಜಾರಿ
ದಯಾನಂದ ಪೂಜಾರಿ ಕೇಚುಮನೆ ಇವರು 2011 ರಿಂದ ಪೂ ಪೂಜನೆ ಮಾಡುತ್ತಿದ್ದಾರೆ. ಇವರ ಮೊದಲು 1950 ರಿಂದ 2011 ರವರೆಗೆ ಬೋಳ ಪೂಜಾರಿ, 1950 ರ ಮೊದಲು ತೋಮ ಪೂಜಾರಿ ಅರ್ಚಕರಾಗಿದ್ದರು.
ಶ್ರೀ ಕೆ. ಚಂದ್ರಶೆಟ್ಟಿ, ದೊಡ್ಡಮನೆ-ಪಟೇಲರ ಮನೆ, ಕುತ್ಪಾಡಿ ಇವರು ಗರೋಡಿಯ ಮೊಕ್ತೇಸರರಾಗಿದ್ದಾರೆ ಇವರ ಮೊದಲು ಶ್ರೀ ಕೃಷ್ಣ
ಎ. ಶೆಟ್ಟಿ, ಶ್ರೀ ಶ್ಯಾಮ ಶೆಟ್ಟಿ, ಶ್ರೀ ತೇಜಪ್ಪ ಮಾಸ್ತರ್ ಇವರುಗಳು ಗರೋಡಿ ಮೊಕ್ತೇಸರರಾಗಿದ್ದರು.
ಗರೋಡಿಯಲ್ಲಿ ಬೈದೇರುಗಳ ದರ್ಶನಕ್ಕೆ ಸ್ಥಳ ಪಾತ್ರಿಗಳು ಈಗ ಇಲ್ಲ. ಹಿಂದೆ ಕುಶಲ ಪೂಜಾರಿ, ಶೀನ ಪೂಜಾರಿ ಹಾಗೂ ಪೂವ ಪೂಜಾರಿಯವರು ಇಲ್ಲಿ ಸ್ಥಳ ಪಾತ್ರಿಗಳಾಗಿದ್ದರು.
ಇಲ್ಲಿ ಹುಲಿ ಚಾಮುಂಡಿಗೆ ನಿತ್ಯ ದೀಪ ಉರಿಸಲಾಗುತ್ತದೆ. ಗರೋಡಿಯಲ್ಲಿ ಆದಿತ್ಯವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ,
ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಅಗೆಲು ಅನ್ನ ನೈವೇದ್ಯ ಸೇವೆ, ಕಟ್ಟುಕಟ್ಟಲೆ ನೇಮ, ಕಾಲಾವಧಿ
ನೇಮೋತ್ಸವ ನಡೆಯುತ್ತದೆ. ಅಷ್ಟಮಿಯಿಂದ ಅರ್ಘ್ಯ ಬಿಡುವುದಿದೆ. ಮರುದಿವಸ ಅನ್ನನೈವೇದ್ಯ ಸೇವೆ, ಪಾಡ್ಯ ದಿನ ವಾಲಗ ಚಾವಡಿಯಲ್ಲಿ ಕಟ್ಟುಕಟ್ಟಲೆ ನೇಮೋತ್ಸವ ಇದೆ.
ಕೊಡಿ ತಿಂಗಳಿನಲ್ಲಿ-ಅಗೆಲು ಅನ್ನ ನೈವೇದ್ಯ ಇದೆ. ಅಂಗಣದಲ್ಲಿ ಕಟ್ಟುಕಟ್ಟಲೆ ನೇಮೋತ್ಸವ, ಜುಮಾದಿ-ಹುಲಿಚಾಮುಂಡಿ ಕೋಲ ಇದೆ.
ಮಾರ್ಚ್ ತಿಂಗಳಲ್ಲಿ ಕಾಲಾವಧಿ ಅಗೆಲ್ ಅನ್ನ ನೈವೇದ್ಯ, ನೇಮೋತ್ಸವ ಇದೆ. ದೀಪಾವಳಿ ಹಬ್ಬದಂದು ಕಂಬನೆಟ್ಟು ದೀಪಾರಾಧನೆ ಇದೆ.
ಸೋಣ ತಿಂಗಳಿನಲ್ಲಿ ಸೋಣಾರತಿ ಪೂಜೆ ಇದೆ.
ಪಟ್ಟ ಸ್ವೀಕಾರ : ಇಲ್ಲಿ ಹೊಸದಾಗಿ ಆಡಳಿತ ಮೊಕ್ತೇಸರರ ಪಟ್ಟವನ್ನು ಅಲಂಕರಿಸುವವರನ್ನು ಕಾನಂಗಿ ದೇವಸ್ಥಾನದ ಕೆರೆಯಲ್ಲಿ ತೀರ್ಥಸ್ನಾನ ಮಾಡಿಸಿ, ಶೃಂಗರಿಸಿ ಅಂಬಲಪಾಡಿ ದೇವಳದ ಬಲ್ಲಾಳರನ್ನು ಒಡಗೂಡಿಸಿಕೊಂಡು ಮೆರವಣಿಗೆ, ಬಿರುದಾವಳಿಗಳಿಂದ ಗರೋಡಿಗೆ ಕರೆತರಬೇಕು. ಬೈದೇರುಗಳು ದರುಶನದಲ್ಲಿ ಅವರ ಕೈ ಹಿಡಿದು ಅವರಿಗೆಂದೇ ಮೀಸಲಾದ ಪೀಠದಲ್ಲಿ ಕುಳ್ಳಿರಿಸಿ, ಗೌರವಿಸುವ ಕ್ರಮ ಕುತ್ಪಾಡಿ ಗರೋಡಿಯಲ್ಲಿದೆ.
ಗರೋಡಿಯ ಕೂಡುಕಟ್ಟು : ಕುತ್ಪಾಡಿ ಗರೋಡಿ ಕೂಡುಕಟ್ಟಿನಲ್ಲಿ ಸುಮಾರು 250 ಮನೆಗಳಿವೆ. ಉದ್ಯಾವರ ಕುತ್ಪಾಡಿ ಎರಡು ಊರುಗಳು
ಸೇರುತ್ತವೆ.
1974, 1983, 2009 ರಲ್ಲಿ ಗರೋಡಿಯ ಜೀರ್ಣೋದ್ಧಾರ-ಬ್ರಹ್ಮಕಲಶ ನಡೆದಿದೆ.
ಮಾರ್ಚ್ ತಿಂಗಳ ನೇಮೋತ್ಸವಕ್ಕೆ ಜಯ ಪರವ ಮತ್ತು ಸಂಘಡಿಗರು ಉಳಿದ ನೇಮೋತ್ಸವಗಳಿಗೆ, ಕೋಲಕ್ಕೆ ಕಿಟ್ಟ ಪಂಬದ, ಮಹೇಶ್ ಗುಜರನ್ಇವರುಗಳು ಈ ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.
ವಿಳಾಸ :
ಶ್ರೀ ಬ್ರಹ್ಮಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಉದ್ಯಾವರ ಕುತ್ಪಾಡಿ ಗರೋಡಿ,
ಅಂಚೆ ಕುತ್ಪಾಡಿ, ಉಡುಪಿ
ತಾಲೂಕು ಮತ್ತು ಜಿಲ್ಲೆ
574118
ಪೂ ಪೂಜನೆ :
ದಯಾನಂದ ಪೂಜಾರಿ ಕೇಚುಮನೆ ಇವರು 2011 ರಿಂದ ಪೂ ಪೂಜನೆ ಮಾಡುತ್ತಿದ್ದಾರೆ. ವಿಳಾಸ : ಅಂಚೆ ಕಡೆಕಾರ್, ಉಡುಪಿ, ದೂರವಾಣಿ :9482042334
ಮೊಕ್ತೇಸರರು :
ಶ್ರೀ ಕೆ. ಚಂದ್ರಶೆಟ್ಟಿ, ದೊಡ್ಡಮನೆ-ಪಟೇಲರ ಮನೆ,
ಕುತ್ಪಾಡಿ ದೂರವಾಣಿ – 9820227293
ಮಾಹಿತಿ ಸಂಗ್ರಹಿಸಿದ ದಿನಾಂಕ:
12-07-2022